ಚಿಕ್ಕಮಗಳೂರು: : ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ರೂ.ಗಳ ಹಗರಣ ನಡೆದಿರುವುದು ಜಾರಿ ನಿರ್ದೇಶನಾಲಯದ ವರದಿಯಿಂದ ಬಹಿರಂಗವಾಗಿದ್ದು, ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನಂದೀಶ್ ಮದಕರಿ ಆಗ್ರಹಿಸಿದ್ದಾರೆ.
ಹಗರಣದಲ್ಲಿ ನಿಗಮದ ಮಾಜಿ ಅಧ್ಯಕ್ಷ ನಾಗೇಂದ್ರ ಅವರು ಒಂದನೆಯ ಆರೋಪಿಯಾಗಿದ್ದು, ಅವರು ತಮ್ಮ ವೈಯಕ್ತಿಕಕ್ಕೆ ನಿಗಮದ ಅನುದಾನವನ್ನು ಬಳಕೆ ಮಾಡಿಕೊಂಡಿರುವುದು ಇಡಿ ವರದಿಯಿಂದ ಬಹಿರಂಗಗೊಂಡಿದೆ. ನಿಗಮದ ಹಣದಲ್ಲೇ ವಿಮಾನದ ಟಿಕೇಟ್ ಖರೀದಿ, ತಮ್ಮ ಕಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ, ಮನೆಯ ವಿದ್ಯುತ್ ವಿಲ್ ಪಾವತಿ, ಮನೆಗೆಲಸದವರಿಗೆ ವೇತನ ನೀಡುವುದರ ಜೊತೆಗೆ ನಿಗಮದ ಅನುದಾನದಲ್ಲೇ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿರುವುದನ್ನು ಸಾಕ್ಷಿ ಸಹಿತ ಇಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ನಿಗಮದ ಹಣ ಬಳಕೆ ಆಗಿರುವುದನ್ನು ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ೧೪.೮೦ ಕೋಟಿ ರೂ.ಗಳನ್ನು ಮೂರು ಜನ ಶಾಸಕರ ಮೂಲಕ ಹಂಚಿಕೆ ಮಾಡಲಾಗಿದ್ದು, ಅಭ್ಯರ್ಥಿ ಇ.ತುಕರಾಂ ಪರ ಮತ ಚಲಾಯಿಸಲು ಪ್ರತಿ ಮತದಾರರಿಗೆ ಎರಡು ನೂರು ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.
ಇದೇ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಲಸ ಮಾಡಲು ಕಾಂಗ್ರೆಸ್ನ ಪ್ರತಿಯೊಬ್ಬ ಕಾರ್ಯಕರ್ತನಿಗೆ ತಲಾ ಹತ್ತು ಸಾವಿರ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಜೊತೆಗೆ ತೆಲಾಂಗಣ ಲೋಕಸಭಾ ಚುನಾವಣೆಗೂ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಕೆ ಮಾಡಿರುವ ಬಗ್ಗೆ ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ವಾಲ್ಮಿಕಿ ಅಭಿವೃಧ್ಧಿ ನಿಗಮ, ಮುಡಾ ನಿವೇಶನ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರ ಪ್ರಕರಣಗಳು ನಡೆದಿರುವುದು ಈಗಾಗಲೇ ವಿವಿಧ ತನಿಖೆಗಳ ಮೂಲಕ ಸಾಬೀತಾಗುತ್ತಿದೆ ಎಂದಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಮೂಲಕವೇ ಸರ್ಕಾರವನ್ನು ನಡೆಸುತ್ತಿದೆ. ನಿಗಮದಲ್ಲಿ ನಡೆದಿರುವ ಪ್ರತಿಯೊಂದು ವ್ಯವಹಾರವೂ ಮುಖ್ಯ ಮಂತ್ರಿ ಅವರ ಗಮನಕ್ಕೆ ಬಾರದೆ ನಡೆಯಲು ಸಾಧ್ಯವೇ ಇಲ್ಲ. ಹಣಕಾಸು ಸಚಿವರು ಆಗಿರುವ ಮುಖ್ಯ ಮಂತ್ರಿ ಅವರು ನಿಜವಾಗಿಯೂ ಜನಪರವಾಗಿದ್ದರೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
District BJP ST Morcha demands resignation of CM