ಚಿಕ್ಕಮಗಳೂರು: ಶ್ರದ್ಧಾಭಕ್ತಿ, ಸಂಯಮ ಎಲ್ಲಾ ಇರುವ ವ್ಯಕ್ತಿ ಯಾವುದೇ ಕೆಟ್ಟ ಭಾವನೆಗಳನ್ನಿಟ್ಟುಕೊಳ್ಳದೆ ಇದ್ದರೆ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದನ್ನು ಸಾರುವ ಕಲಾಕೃತಿಗಳು ಅಕ್ಷರಗಳಲ್ಲಿ ರಚನೆ ಮಾಡಿ ಮೂಡಿಬಂದಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಹೇಳಿದರು.
ಅವರು ಇಂದು ತೇರಾಪಂಥ್ ಭವನದಲ್ಲಿ ಏರ್ಪಡಿಸಲಾಗಿದ್ದ ತೇರಾಪಂಥ್ ಧರ್ಮ ಸಂಘದ ಸಾಧು-ಸಾಧ್ವಿಯರಿಂದ ತಯಾರಿಸಲ್ಪಟ್ಟ ಹಸ್ತ ಶಿಲ್ಪ ಕಲೆಗಳ ವಿಶಾಲ ಕಲಾ ಪ್ರದರ್ಶನ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ರೀತಿಯ ಹಸ್ತ ಕಲೆಯ ವಸ್ತುಪ್ರದರ್ಶನದ ಮೂಲಕ ಭಾರತದ ಸಂಸ್ಕೃತಿ ಪರಂಪರೆಗಳನ್ನು ತೋರಿಸುವಂತಹ ಕಾರ್ಯದಲ್ಲಿ ಮುನಿಶ್ರೀಗಳು ಮುಂದಾಗಿದ್ದಾರೆಂದು ತಿಳಿಸಿದರು.
ಆಧುನಿಕತೆಯಲ್ಲಿ ಇಂದು ನಾವುಗಳು ಪಿನ್ನಲ್ಲಿ ಮುಳ್ಳನ್ನು ತೆಗೆಯುತ್ತೇವೆ, ಮರದಲ್ಲಿ ಮೊನಚಾದ ಪಿನ್ ಮಾಡಿಕೊಂಡು ಮುಳ್ಳು ತೆಗೆಯುತ್ತಿದ್ದರು ಎಂಬುದು ಈ ವಸ್ತು ಪ್ರದರ್ಶನದಲ್ಲಿ ಕಂಡುಬರುತ್ತದೆ ಎಂದರು.
೩೦ ಸಾವಿರ ಅಕ್ಷರಗಳುಳ್ಳ ಭಗವದ್ಗೀತೆಯನ್ನು ಒಂದು ಪೇಪರ್ ಶೀಟಿನಲ್ಲಿ ಅನಾವರಣ ಮಾಡಿರುವುದು ಬಹಳ ವಿಶೇಷವಾಗಿದೆ. ಒಟ್ಟಾರೆಯಾಗಿ ಈ ಎಲ್ಲಾ ಕಲಾಕೃತಿಗಳು ಪೂರ್ವಜರ ತಾಳ್ಮೆಯನ್ನು ಬಿಂಬಿಸುತ್ತವೆ ಎಂದು ತಿಳಿಸಿದರು.
ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಗುರುಗಳ ಶ್ರೀರಕ್ಷೆ ಇದ್ದರೆ ಉತ್ತಮವಾದ ಸ್ಥಾನಮಾನಗಳು ಸಮಾಜದಲ್ಲಿ ಲಭಿಸುತ್ತವೆ, ಈ ನಿಟ್ಟಿನಲ್ಲಿ ಗುರುವಿನ ಆಶೀರ್ವಾದ, ಆಶ್ರಯ ಬಹಳ ಮುಖ್ಯ ಎಂದರು.
ಭಾರತದ ಸನಾತನ ಸಂಸ್ಕೃತಿ ಗುರುಪರಂಪರೆಯನ್ನು ಹೊಂದಿದೆ. ಗುರುಗಳು ಹಸ್ತ ಕಲಾಕೃತಿಗಳನ್ನು ಹಿಂದಿನಿಂದ ತಯಾರಿಸಿಕೊಂಡು ಬಂದಿದ್ದು, ಇತಿಹಾಸವನ್ನು ಪುಸ್ತಕದಲ್ಲಿ ತಾವು ಅಧ್ಯಯನ ಮಾಡಿಕೊಂಡು ಬಂದಿದ್ದು, ಇಂದು ಕಲಾಕೃತಿಗಳಲ್ಲಿ ಇತಿಹಾಸವನ್ನು ಜೀವಂತವಾಗಿ ನೋಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಈ ವಸ್ತುಪ್ರದರ್ಶನವನ್ನು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಮಕ್ಕಳಿಗೆ ತೋರಿಸಿದಾಗ ಜ್ಞಾನ ಸಂಪಾದನೆಯಾಗಿ ಸಾರ್ಥಕತೆಯಾಗುತ್ತದೆ. ಹೂವು, ಎಲೆಗಳಿಂದ ಪ್ರಕೃತಿಯಿಂದ ದೊರೆಯುವ ಬಣ್ಣಗಳಲ್ಲಿ ಈ ಕಲಾಕೃತಿಗಳು ರಚಿತವಾಗಿರುವುದು ಶ್ಲಾಘನೀಯ ಎಂದರು.
ಪಾಪ-ಪುಣ್ಯಗಳ ಬಗ್ಗೆ ಅರಿವು ಮೂಡಿಸುವ ಚಿತ್ರಗಳು ಜನರ ಗಮನ ಸೆಳೆಯುವಂತಿದೆ. ಜೈನ ಧರ್ಮ ಯಾವುದೇ ಜೀವಿಯನ್ನು ಹಿಂಸಿಸುವುದಿಲ್ಲ. ಗೋರಕ್ಷಣೆಯಲ್ಲಿ ಜೈನ ಧರ್ಮೀಯರು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಾಗ ಎಲ್ಲವನ್ನೂ ಸಾಧಿಸಲು ಸಹಕಾರಿಯಾಗುತ್ತದೆ. ಮನಸ್ಸನ್ನು ಹುಚ್ಚು ಕುದುರೆಯಂತೆ ಹರಿಯ ಬಿಡಬಾರದು ಎಂಬ ಕಲಾಕೃತಿ ತುಂಬಾ ಆರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೇರಾಪಂಥ್ ಸಂಘದ ಅಧ್ಯಕ್ಷ ಮಹೇಂದ್ರ ಡೋಸಿ ಮಾತನಾಡಿ, ಈ ವಸ್ತು ಪ್ರದರ್ಶನದಲ್ಲಿ ಐದು ಸಾವಿರ ವರ್ಷಗಳ ಕ್ಯಾಲೆಂಡರ್, ಸ್ವರ್ಗ ಮತ್ತು ನರಕದ ರೇಖಾಚಿತ್ರ, ಬುದ್ಧಿವಂತಿಕೆಯ ಪರೀಕ್ಷೆಯ ಪ್ರಪಂಚ, ಸ್ಕ್ರಿಪ್ಟ್ ಆರ್ಟ್ ಸ್ಟೋರ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಹಸ್ತ ಪ್ರತಿಗಳನ್ನು ಉಲ್ಲೇಖಿಸಲಾಗಿದೆ ಎಂದರು.
ಪೀಪಲ್ ಎಲೆಗಳ ಮೇಲೆ ಕಲಾತ್ಮಕ ಚಿತ್ರಕಲೆ, ಕಾರ್ಡ್ಬೋರ್ಡ್ ಸನ್ಡಿಯಲ್, ಅಕ್ಷರಗಳ ಮೇಲೆ ಮೈಕ್ರೋ ಸ್ಕ್ರಿಪ್ಟ್ ಗುರುತು ಸ್ಪೂರ್ತಿದಾಯಕ ಚಿತ್ರ ಮುಂತಾದವುಗಳನ್ನು ವೀಕ್ಷಿಸಲು ಈ ಮೂರು ದಿನಗಳ ಕಾಲ ಆಯೋಜಿಸಿರುವ ಹಸ್ತ ಶಿಲ್ಪಗಳ ಕಲಾ ಪ್ರದರ್ಶನಕ್ಕೆ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುನಿಶ್ರೀ ಮೋಹಜಿತ್ಕುಮಾರ್, ಮುನಿಶ್ರೀ ಭವ್ಯಕುಮಾರ್, ಮುನಿ ಜಯೇಶ್ ಕುಮಾರ್ ವಹಿಸಿ ಆಶೀರ್ವಚನ ನೀಡಿದರು. ಪದಂಚಂದ್ ನಹರ್, ಗುಣವತಿ ನಹರ್, ನರೀತ ಗಾಧೀಯಾ, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
A vast art exhibition of hand sculpture arts