ಚಿಕ್ಕಮಗಳೂರು: ಹಿಂದೂಗಳನ್ನು ಪ್ರತೀ ಹಂತದಲ್ಲಿ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸುವ ನಿಟ್ಟಿನಲ್ಲಿ ಬಿಜೆಪಿಗೆ ರಾಜಕಾರಣ ಅನಿವಾರ್ಯವಾಗಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಅವರು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಆವತಿಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರದ ಈ ಕ್ರಮವನ್ನು ಅರ್ಥಮಾಡಿಕೊಳ್ಳುವ ಅಗತ್ಯ ಇದೆ ಎಂದ ಅವರು ದೇಶ ಮೊದಲು, ಹಿಂದುತ್ವದ ಬಗ್ಗೆ ಗಟ್ಟಿ ನಿಲುವು ತಾಳಿ ಬಿಜೆಪಿ ಮೊದಲ ಅದ್ಯತೆ ನೀಡಿದೆ ಎಂದರು.
ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಾಯಕರು ಮತ್ತು ಕಾರ್ಯಕರ್ತರಲ್ಲಿ ವಿನಂತಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ದೀಪಕ್ ದೊಡ್ಡಯ್ಯ ಮಾತನಾಡಿ, ಕಟ್ಟುವ ಹೊಸ ನಾಡೊಂದನ್ನು ಎಂಬ ಮಾತು ಈ ಶಿಸ್ತುಬದ್ದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿರುವುದು ಸಾಕ್ಷಿಯಾಗಿದೆ. ಬಿಜೆಪಿ ರಾಜಕೀಯ ಪಕ್ಷ ಅಲ್ಲ, ಸಿದ್ಧಾಂತ, ತತ್ವ, ರಾಷ್ಟ್ರ ನಿರ್ಮಾಣಕ್ಕಾಗಿ ಬೆಳೆದುಬಂದ ಪಕ್ಷ ಬಿಜೆಪಿ. ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೆ ಅಧಿಕಾರದಲ್ಲಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಪರಾಭವಗೊಳ್ಳಲು ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬರುವ ತಾ.ಪಂ, ಜಿ.ಪಂ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಿಜೆಪಿ ಗೆಲ್ಲಬೇಕು, ಅದಕ್ಕೆ ಪಕ್ಷದ ಸಿದ್ಧಾಂತವನ್ನು ಮನೆಮನೆಗೆ ತಲುಪಿಸಬೇಕಾಗಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನೂತನ ಅಧ್ಯಕ್ಷ ಕೆರೆಮಕ್ಕಿ ಮಹೇಶ್ ಮಾತನಾಡಿ, ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದು ಹೋರಾಟದ ಮನೋಭಾವದಿಂದ ಮಾಜಿ ಸಚಿವ ಸಿ.ಟಿ. ರವಿ ಹಾಗೂ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅವರುಗಳು ರಾಜಕೀಯ ಪ್ರವೇಶ ಪಡೆದಿದ್ದಾರೆ ಎಂದರು.
ಆಸ್ತಿ, ಹಣ ಗಳಿಸಿದಷ್ಟು ಜನರ ವಿಶ್ವಾಸವನ್ನು ಗಳಿಸುವುದು ಸುಲಭದ ವಿಷಯವಲ್ಲ, ಇಂದು ಬಿಜೆಪಿಯ ಈ ನಾಯಕರು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ ಅವರು, ನನಗೆ ಇಂದು ಸಿಕ್ಕಿರುವ ಸ್ಥಾನವನ್ನು ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ಎಂದು ಪರಿಗಣಿಸಿ ಕೆಲಸ ನಿರ್ವಹಿಸುತ್ತೇನೆಂದು ಭರವಸೆ ನೀಡಿದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ರತನ್ ಟಾಟಾ ನಿಧನರಾದಾಗ ಇಡೀ ಭಾರತ ಕಂಬನಿ ಮುಡಿಯಿತು. ರಾಜ್ಯದಲ್ಲಿ ಪುನೀತ್ ರಾಜ್ಕುಮಾರ್ ಮೃತಪಟ್ಟಾಗ ಜನ ಮರುಗಿದರು. ಇದನ್ನು ಜನ ನಮ್ಮ ನೋವು ಎಂದು ಭಾವಿಸಿದ್ದರು ಎಂಬುದನ್ನು ಬಿಜೆಪಿ ಮುಖಂಡರಾದಿಯಾಗಿ, ಕಾರ್ಯಕರ್ತರು ಮನನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ದೇಶ ಪ್ರೇಮಕ್ಕೆ ಇವರುಗಳು ಸಾಕ್ಷಿಯಾಗಿದ್ದಾರೆ. ಯಾವುದೇ ಪಕ್ಷದ ಜವಾಬ್ದಾರಿ ಇಟ್ಟುಕೊಳ್ಳದೆ ಜನಸೇವೆ ಮಾಡಿ ತಮ್ಮ ಸ್ವಂತ ಸಾಮ್ರಾಜ್ಯ ಕಟ್ಟಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಬೇಕಾಗಿದೆ. ಎಲ್ಲರನ್ನೂ ಒಪ್ಪಿಕೊಳ್ಳುವವರು ಜನನಾಯಕರಾಗುತ್ತಾರೆ. ಆವತಿಯಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದೀರಿ, ದೇಶದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಕರೆ ನೀಡಿದರು.
ಒಬ್ಬ ವ್ಯಕ್ತಿಯಿಂದ ಯಾವುದೇ ಪಕ್ಷ ನಿರ್ಮಾಣ ಆಗಬಾರದು, ಸಿದ್ಧಾಂತ ಮತ್ತು ತತ್ವದ ಮೇಲೆ ಪಕ್ಷ ಸಂಘಟನೆ ಆಗಬೇಕು, ನಿರಂತರವಾದ ಒಳ್ಳೆಯ ನಾಯಕತ್ವವನ್ನು ನೂತನ ಅಧ್ಯಕ್ಷರು ಕೊಡಲಿ ಎಂದು ಶುಭ ಹಾರೈಸಿದರು.
ಆವತಿ ಕಾಫಿಯನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲಾ ವೇದಿಕೆಗಲು ಸಿದ್ದವಿದೆ ಆದರೆ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ವಿಷಾಧಿಸಿದ ಅವರು, ಭಾರತದ ಕಾಫಿಯನ್ನು ಐದನೇ ಸ್ಥಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ, ಆವತಿ ಹೋಬಳಿಯ ಬಿಜೆಪಿ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ, ನಾಲ್ಕು ವರ್ಷಗಳಿಂದ ಮಾಕೋಡು ಪ್ರಶಾಂತ್ ರವರು ಗುಂಪುಗಾರಿಕೆಗೆ ಅವಕಾಶ ನೀಡದೆ ಸಂಘಟನೆ ಮಾಡಿದ್ದಾರೆಂದು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಮಾಕೋಡು ಪ್ರಶಾಂತ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರುಗಳಾದ ನಾಗೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಮಹೇಶ್, ರವಿ, ಪ್ರವೀಣ್, ನಾಗೇಶ್ಗೌಡ, ವಿನ್ಸೆಂಟ್, ಅರುಣ್, ಎಂ.ಎನ್. ಮಂಜುನಾಥ್, ನಾಗೇಶ್, ಹೆಚ್.ಪಿ. ಮಹೇಂದ್ರ, ಶೇಖರ್, ಶಾಂತೇಗೌಡ, ಪೂರ್ಣೇಶ್, ರವೀಂದ್ರ, ವೀಣಾಶೆಟ್ಟಿ, ಮನು ಬಸರವಳ್ಳಿ, ಸಂಪತ್ ಹೆಡದಾಳ್, ಅರವಿಂದ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಪ್ರಥಮ್ ಸ್ವಾಗತಿಸಿದರು.
BJP politics against Congress government appeasing Hindus