ಚಿಕ್ಕಮಗಳೂರು: ಶೋಷಿತ ವರ್ಗದ ಬಡವರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದಿಂದ ಸರ್ಕಾರ ಅಂಬೇಡ್ಕರ್, ಬುದ್ಧ, ಬಸವ, ಕನಕದಾಸರ ವಿಚಾರಧಾರೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಅಭಿವೃದ್ಧಿಗೆ ಸಂಕಲ್ಪ ಮಾಡಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ತೊಗಹಂಕಲ್ ಮತ್ತು ದಾಸರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೨೦ ಲಕ್ಷ ರೂ. ವೆಚ್ಚದಲ್ಲಿ ಸಂತೆ ಮಾರ್ಕೇಟ್ ಗುಡ್ಡೇನಹಳ್ಳಿ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಆರು ತಿಂಗಳಲ್ಲಿ ಬಿಜೆಪಿ ಆರೊಪಿಸುತ್ತಿರುವ ಅಭಿವೃದ್ಧಿ ಕುಂಠಿತ ಎಂಬುದಕ್ಕೆ ಅಭಿವೃದ್ಧಿ ಮಾಡುವ ಮೂಲಕ ತಕ್ಕ ಉತ್ತರ ನೀಡಲು ಬದ್ಧರಾಗಿದ್ದೇವೆ ಎಂದರು.
೫ ಕೋಟಿ ರೂ. ವೆಚ್ಚದಲ್ಲಿ ಸಿಆರ್ಎಫ್ ಯೋಜನೆಯಡಿ ಮಲ್ಲೇನಹಳ್ಳಿಯಿಂದ ಸಂತವೇರಿವರೆಗೆ ಹೊಸದಾಗಿ ಡಾಂಬರೀಕರಣ ಮಾಡಲು ಉದ್ದೇಶಿಸಿದ್ದು, ಮಳೆಗಾಲ ಮುಗಿದ ಬಳಿಕ ಕಾಮಗಾರಿ ಅರಂಭವಾಗಲಿದೆ ಎಂದು ಭರವಸೆ ನೀಡಿದರು.
ಚಿಕ್ಕಮಗಳೂರು ನಗರದಲ್ಲಿ ಅಲ್ಪಸಂಖ್ಯಾತರು ವಾಸವಾಗಿರುವ ಬಡಾವಣೆಯಲ್ಲಿ ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರೆವೇರಿಸುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ನಡೆಯಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಬಡವರಿಗೆ ಬದುಕು ಕಟ್ಟಿಕೊಟ್ಟಿದೆ. ಇದಕ್ಕಾಗಿ ೫೯ ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ಕ್ಷೇತ್ರಕ್ಕೆ ೨೫ ಕೋಟಿ ರೂ. ಅನುದಾನವನ್ನು ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಈಗ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ಆದೇಶ ನೀಡಿದ್ದಾರೆಂದರು.
ಚಿಕ್ಕಮಗಳೂರು ಕ್ಷೇತ್ರದ ೩೪ ಗ್ರಾ.ಪಂ ವ್ಯಾಪ್ತಿಯ ಅಭಿವೃದ್ಧಿಗೆ ೧೫ ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ರಸ್ತೆಗಳಿಗೆ ಖರ್ಚು ಮಾಡಲಾಗುವುದು.೭ ಕೋಟಿ ರೂ. ಅನುದಾನದಲ್ಲಿ ೪ ಕೋಟಿ ರೂ. ದೇವಾಲಯಗಳಿಗೆ, ೩ ಕೋಟಿ ರೂ. ಸಮುದಾಯಭವನಗಳ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಮಾಜಿ ಜಿ.ಪಂ ಅಧ್ಯಕ್ಷ ಕೆ. ಮಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ಗ್ರಾ.ಪಂ ಸದಸ್ಯ ಸುರೇಶ್, ಲೋಕೇಶ್, ಮಲ್ಲಾಸೆಲ್ವಿ, ಪನ್ನೀರ್, ಸ್ವಾಮಿಗೌಡ ದಾಸರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಕ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವೇಗೌಡ, ಉಪಾಧ್ಯಕ್ಷೆ ಮಾಲಾಶ್ರೀ, ಗ್ರಾಪಂ ಸದಸ್ಯರಾದ ಅವಿಲಾಚಂದ್ರಶೇಖರ್, ಮಂಜು, ವಿನೋದ, ಲಲಿತಾ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
Government is committed to the development of the poor