ಚಿಕ್ಕಮಗಳೂರು: ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅ.೨೫ರಂದು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಹೇಳಿದರು.
ಶುಕ್ರವಾರ ನಗರದ ಜಿಪಂ ಕಚೇರಿ ಮಿನಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಟಿ ಕಾಲೇಜಿನ ಆಡಿಟೋರಿಯಂನಲ್ಲಿ ಕಾರ್ಯಾಗಾರ ನಡೆಯಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಇನ್ಸೈಟ್ ಸಂಸ್ಥೆಯ ಸಹಕಾರದಲ್ಲಿ ಕಾರ್ಯಗಾರ ಆಯೋಜಿಸಲಾಗುತ್ತಿದೆ ಎಂದರು.
ಜಿಲ್ಲೆಯ ವಸತಿ ನಿಲಯಗಳಲ್ಲಿರುವ ಪಿಯುಸಿ, ಪದವಿ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಲು ಪೂರ್ವಭಾವಿ ಪರೀಕ್ಷೆಯನ್ನು ಎದುರಿಸಬೇಕಿದೆ. ಪರೀಕ್ಷೆ ಬರೆಯುವ ಪ್ರತೀ ಹಾಸ್ಟೇಲ್ಗಳ ಪೈಕಿ ಪರೀಕ್ಷೆಯಲ್ಲಿ ಮೊದಲ ೧೦ ಸ್ಥಾನ ಪಡೆದ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಬಹುದಾಗಿದೆ. ಅ.೨೧ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ೬೪ ವಸತಿ ಶಾಲೆಗಳ ೫ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅತೀ ಹೆಚ್ಚು ಅಂಕಗಳಿಸಿದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ೨೦ ವಿದ್ಯಾರ್ಥಿಗಳು ಹಾಗೂ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ೩೦ ವಿದ್ಯಾರ್ಥಿಗಳು ಸೇರಿ ಒಟ್ಟು ೫೦ ವಿದ್ಯಾರ್ಥಿಗಳಿಗೆ ಇನ್ಸೈಟ್ ಐಎಎಸ್ ತರಬೇತಿ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಶಿಷ್ಯವೇತನ ದೊರೆಯಲಿದೆ ಎಂದ ಅವರು, ಪೂರ್ವಭಾವಿ ಪರೀಕ್ಷೆಯನ್ನು ಆಯಾ ಹಾಸ್ಟೆಲ್ಗಳಲ್ಲಿ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷಾ ಮಾದರಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಪ್ರತೀ ವಸತಿ ನಿಲಯದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ೧೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಾರ್ಯಾಗಾರದಲ್ಲಿ ಅಂದಾಜು ೫೦೦-೬೫೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾನಿತ್ವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಅರಿವಿನ ಕೊರತೆಯಿಂದ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಗಾರ ಆಯೋಜಿಸಲಾಗಿದೆ ಎಂದರು.
ಮೈಸೂರು ದಸರಾದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸ್ತಬ್ಶಚಿತ್ರಕ್ಕೆ ಸಮಾಧಾನಕರ ಬಹುಮಾನಕ್ಕೆ ಪಾತ್ರವಾಗಿದೆ. ತೇಜಸ್ವಿ ವಿಸ್ಮಯ ಶಿರ್ಷಿಕೆಯಡಿಯ ಸ್ತಬ್ಧಚಿತ್ರವನ್ನು ಶಾಂತಿನಿಕೇತನ ಚಿತ್ರಕಲಾ ವಿದ್ಯಾನಿಲಯ ನಿರ್ಮಿಸಿದ್ದು, ಈ ಸ್ತಬ್ಧಚಿತ್ರಕ್ಕೆ ಸಮಾಧಾನಕರ ಬಹುಮಾನ ಬಂದಿರುವುದು ಸಂತಸವಾಗಿದೆ. ೧೩ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದ ಸ್ತಬ್ಧಚಿತ್ರ ಜನಮನ್ನಣೆಗಳಿಸಿತ್ತು. ದಸರಾದಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳ ಪೈಕಿ ೩ ಸ್ತಬ್ಧಚಿತ್ರಕ್ಕೆ ಸಮಾಧಾನಕರ ಬಹುಮಾನ ಬಂದಿದು, ಇದರಲ್ಲಿ ನಮ್ಮ ಜಿಲ್ಲೆಯೂ ಸೇರಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಉಪಸ್ಥಿತರಿದ್ದರು.
Information workshop for students in residential schools