ಚಿಕ್ಕಮಗಳೂರು: ನಗರದ ಬಸವನಹಳ್ಳಿ ಕೆರೆಯಿಂದ ಪವಿತ್ರವನದವರೆಗಿನ ಕೆ.ಎಂ.ರಸ್ತೆಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಉಪ ವಿಭಾಗಾಧಿಕಾರಿ ದಲ್ಜಿತ್ಕುಮಾರ್ ಅವರನ್ನು ಶನಿವಾರ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ದರು.
ನಗರದ ಶ್ರೀ ಕತ್ರಿಮಾರಮ್ಮ ದೇವಾಲಯದಿಂದ ಕಣಿವೆ ರುದ್ರೇಶ್ವರ ದೇವಾಲಯದವರೆಗಿನ ಕೆ.ಎಂ.ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿಲ್ಲ. ಇದರಿಂದಾಗಿ ರಾತ್ರಿಯಾಗುತ್ತಿದ್ದಂತೆ ಆ ರಸ್ತೆ ಸಂಪೂರ್ಣ ಕತ್ತಲುಮಯವಾಗುತ್ತದೆ. ಹಾಗಾಗಿ ಆ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ದೂರಿದರು.
ಕೆ.ಎಂ.ರಸ್ತೆಯಲ್ಲಿ ಕೃಷಿ ಮಾರುಕಟ್ಟೆ ಇದೆ. ಬೀಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿವೆ. ಹೌಸಿಂಗ್ ಬೋರ್ಡ್ ಸೇರಿದಂತೆ ಅನೇಕ ಬಡಾವಣೆ ಗಳಿವೆ. ಅಲ್ಲಿನ ನಿವಾಸಿಗಳು, ರೈತರು, ಮಹಿಳೆಯರು ಮತ್ತು ಮಕ್ಕಳು ಬೀದಿ ದೀಪ ಇಲ್ಲದಿರುವುದರಿಂದಾಗಿ ಕಗ್ಗತ್ತಲಲ್ಲಿ ಜೀವ ಬಿಗಿ ಹಿಡಿದು ಓಡಾಡುವಂತಾಗಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಆ ರಸ್ತೆಗೆ ಬೀದಿ ದೀಪಗಳನ್ನು ತಕ್ಷಣ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮ ನಾಯಕ್, ಜಿಲ್ಲಾಧ್ಯಕ್ಷ ಪಿ.ಕುಮಾರ್, ಸಹ ಸಂಚಾಲಕ ಕೆ.ಬಿ. ರಾಕೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಬಿ.ರೂಪೇಶ್. ಯೋಗೀಶ್ ಹಾಜರಿದ್ದರು.
Request for installation of street lights on K.M. Road