ಚಿಕ್ಕಮಗಳೂರು: ಅಭಿವೃದ್ಧಿಗೆ ಯಾವುದೇ ಪಕ್ಷ ಇಲ್ಲ. ದೂರದೃಷ್ಠಿ ಇಟ್ಟುಕೊಂಡು ಯೋಜನೆ ರೂಪಿಸಿದರೆ ಅದರ ಫಲ ಚಿಕ್ಕಮಗಳೂರಿಗೆ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಅವರು ತೇಗೂರಿನಲ್ಲಿ ೧೬ ಕೋಟಿ ರೂ. ವೆಚ್ಚದ ತೇಗೂರು-ರಾಂಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ತೇಗೂರು ಮತ್ತು ರಾಂಪುರದ ರಸ್ತೆ ಅಭಿವೃದ್ಧಿಗೆ ೨೦೨೨-೨೩ ನೇ ಸಾಲಿನಲ್ಲಿ ೧೬ ಕೋಟಿ ರೂ. ಮಂಜೂರು ಮಾಡಿಸಿದ್ದೆವು. ಈ ವರ್ಷದ ಕೊನೆಗೆ ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣಗೊಂಡು, ಮುಂದಿನ ವರ್ಷ ಕೊನೆಯ ವೇಳೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಮೆಡಿಕಲ್ ಕಾಲೇಜಿಗೆ ಓಡಾಡಲು ಉತ್ತಮವಾದ ರಸ್ತೆ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ೧೦೮ ಕೋಟಿ ರೂ. ಹಣವನ್ನು ಪಿಡಬ್ಲ್ಯುಡಿಗೆ ೨೦೨೩ ರಲ್ಲಿ ಮಂಜೂರು ಮಾಡಿಲಾಗಿತ್ತು. ಅದರಲ್ಲಿ ೧೬ ಕೋಟಿ ರೂ. ಹಣವನ್ನ ಎರಡೂ ಕಡೆ ರಸ್ತೆ ಅಭಿವೃದ್ಧಿಗೆ ಮೀಸಲಿಡಾಗಿತ್ತು ಎಂದರು.
ತೇಗೂರು ಭಾಗ ಭವಿಷ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾಣುವ ಪ್ರದೇಶವಾಗಿದೆ. ಈಗಾಗಲೇ ಮೆಡಿಕಲ್ ಕಾಲೇಜು, ಸೂಪರ್ಸ್ಪೆಷಾಲಿಟಿ ಆಸ್ಪತ್ರೆ, ಸೈನ್ಸ್ ಸೆಂಟರ್, ಕೇಂದ್ರೀಯ ವಿದ್ಯಾಲಯ ಎಲ್ಲವೂ ಬರುತ್ತಿದೆ. ಕದ್ರಿಮಿದ್ರಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಇದರೊಂದಿಗೆ ಒಂದು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ತರಬೇತಿ ಮತ್ತು ಆಟವಾಡಲು ಅನುಕೂಲವಾಗುವ ಸ್ಟೇಡಿಯಂಗಾಗಿ ಜಾಗ ಗುರುತಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಸಹ ಇದೇ ಭಾಗದಲ್ಲಿ ಹಾದುಹೋಗಲಿದೆ. ಇದಕ್ಕಾಗಿ ಡಿಪಿಆರ್ ಸಲ್ಲಿಸಿ, ಕೇಂದ್ರ ಸರ್ಕಾರದಿಂದ ಮಂಜೂರಾತಿಯೂ ಆಗಿದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಸಿ.ಟಿ.ರವಿ ಅವರ ಮನವಿ ಮೇರೆಗೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಪಿಡಬ್ಲ್ಯುಡಿಗೆ ೫೯ ಕೋಟಿ ರೂ. ಮಂಜೂರಾಗಿ ಕಾಮಗಾರಿಗೆ ಟೆಂಡರ್ ಆಗಿತ್ತು. ಆದರೆ ಸರ್ಕಾರ ಬದಲಾದ ನಂತರ ಒಂದಷ್ಟು ಅನುದಾನ ಕೊರತೆ ಕಾರಣಕ್ಕಾಗಿ ಟೆಂಡರ್ ಆಗಿ, ಕಾರ್ಯಾದೇಶ ನೀಡಲಾಗಿದ್ದ ಕಾಮಗಾರಿಯನ್ನೂ ತಡೆ ಹಿಡಿಯಲಾಗಿತ್ತು. ಇದೀಗ ಅಷ್ಟೂ ಕಾಮಗಾರಿಗೆ ಕಾರ್ಯಾದೇಶ ಕೊಡಿಸಿ ಕಾಮಗಾರಿಯನ್ನು ಪ್ರಾರಂಭಿಸುವ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇನೆ ಎಂದರು.
ಈ ರಸ್ತೆಗಳು ಚಿಕ್ಕಮಗಳೂರು ಜನರ ಕನಸಾಗಿತ್ತು. ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ನಂತರ ಈ ಭಾಗದಲ್ಲಿ ವ್ಯಾವಹಾರಿಕವಾಗಿ ದೊಡ್ಡದಾಗಿ ಬೆಳವಣಿಗೆ ಕಾಣಬಹುದು. ಭೂಮಿಗೂ ಉತ್ತಮ ಬೆಲೆ ಬರಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷೆ ರಾಧಾ, ನಗರಸಭೆ ಸದಸ್ಯ ಪರಮೇಶ್, ಸಿಡಿಎ ಮಾಜಿ ಅಧ್ಯಕ್ಷ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಬೇಬಿ ಜಾನ್, ಜಯಶ್ರೀ, ಸಹಾಯಕ ಇಂಜಿನೀಯರ್ ಗವಿರಂಗಪ್ಪ ಇತರರು ಇದ್ದರು.
Development has no party