ಚಿಕ್ಕಮಗಳೂರು: ಜಿಲ್ಲೆಯಲ್ಲಿ ವರುಣನ ಆರ್ಭಟ ಭಾನುವಾರವೂ ಮುಂದುವರೆದಿತ್ತು. ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಗುಡುಗು, ಮಿಂಚು ಸಹಿತ ಭಾರೀ ಮಳೆ ಬಂದಿದ್ದು ಜನಜೀವನ ಅಸ್ತವ್ಯಸ್ಥವಾಗಿತ್ತು. ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ಹಲವೆಡೆ ಹೊಲ, ಗದ್ದೆ, ತೋಟಗಳು ಜಲಾವ್ರತವಾಗಿವೆ. ಕಿರು ಸೇತುವೆಗಳು ಮುಳುಗಡೆಯಾಗಿದ್ದರಿಂದ ರಸ್ತೆ ಸಂಪರ್ಕ ಕಡಿದು ಹೋಗಿದೆ.
ನಗರ ಪ್ರದೇಶಗಳಲ್ಲಿ ತೆರೆದ ಚರಂಡಿಗಳು ಭರ್ತಿಯಾದ ಪರಿಣಾಮ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಕಾಫಿಯ ನಾಡು ಚಿಕ್ಕಮಗಳೂರು ಮಳೆಯ ಆರ್ಭಟಕ್ಕೆ ತತ್ತರಿಸುತ್ತಿದೆ. ಪ್ರತಿ ದಿನ ಒಂದಲ್ಲಾ ಒಂದು ಸಮಯಕ್ಕೆ ಬಹುತೇಕ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಶನಿವಾರ ಮಧ್ಯಾಹ್ನ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಭಾರೀ ಮಳೆಯಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಭಾನುವಾರವೂ ಕೂಡ ಅದೇ ರೀತಿಯಲ್ಲಿ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ಮಳೆ ಬಂದಿದೆ.
ತರೀಕೆರೆ ತಾಲೂಕಿನಾದ್ಯಂತ ಭಾನುವಾರವೂ ಧಾರಾಕಾರವಾಗಿ ಮಳೆ ಸುರಿದಿದೆ. ಬೆಳಿಗ್ಗೆ ಬಂದ ಮಳೆ ನಂತರ ಬಿಡುವು ನೀಡಿತು. ಆದರೆ, ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ತರೀಕೆರೆ ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರ ಪರಿಣಾಮ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ಗಂಟೆಗಟ್ಟಲೆ ಜನರು ರಸ್ತೆ ಬದಿಯಲ್ಲಿರುವ ಅಂಗಡಿಗಳ ಮುಂದೆ ನಿಂತಿದ್ದರು.
ತರೀಕೆರೆ ಪಟ್ಟಣದಲ್ಲಿರುವ ಚಿಕ್ಕಕೆರೆ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಆಸುಪಾಸಿನ ಹೊಲಗದ್ದೆಗಳು ಜಲಾವ್ರತವಾಗಿದ್ದವು. ಬೆಟ್ಟದಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡದೊಳಗೆ ನೀರು ನಿಂತಿದ್ದು ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ್ದರು. ಸೋಮವಾರದಂದು ಶಾಲೆಗಳು ಪುನಾರಂಭ ಆಗುವುದರ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಸಮೀಪದ ಆಸ್ಪತ್ರೆ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಅಜ್ಜಂಪುರ ತಾಲೂಕಿನ ಸಣ್ಣ ಬೋಕಿಕೆರೆ, ಕೋರನಹಳ್ಳಿ, ಚಟ್ಟನಹಳ್ಳಿ, ಶವಪುರ ಭಾಗದಲ್ಲಿ ಹಳ್ಳದ ನೀರು ಹರಿದು ಭಾರೀ ಅನಾಹುತ, ಗೊಲ್ಲರಹಳ್ಳಿಯ ಹೂವಿನಹೊಲದಲ್ಲಿ ನಿಂತ ಮಳೆ ನೀರು ನಿಂತಿದೆ. ಬೀರೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಧಾರಾಕಾರವಾಗಿ ಮಳೆ ಸುರಿಯಿತು. ಕಡೂರು ತಾಲೂಕಿನಲ್ಲೂ ವರುಣ ಆರ್ಭಟ ಜೋರಾಗಿತ್ತು. ಇಲ್ಲಿನ ದೊಡ್ಡಬೋಕಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಭಾರೀ ಮಳೆಗೆ ತೆಂಗು, ಅಡಿಕೆ, ಬಾಳೆ ಹಾಗೂ ಜಾನುವಾರು ಮೇವು ಸಂಪೂರ್ಣ ಬೆಳೆನಾಶಗೊಂಡಿದೆ.
ಚಿಕ್ಕಮಗಳೂರು ತಾಲೂಕಿನಾದ್ಯಂತ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಭಾನುವಾರವೂ ಮಳೆ ಮುಂದುವರೆದಿತ್ತು. ಬೆಳಿಗ್ಗೆ ಕೆಲ ಸಮಯ ಬಂದು ಬಿಡುವು ನೀಡಿದ ಮಳೆ ಮಧ್ಯಾಹ್ನ ಮತ್ತೆ ಆರಂಭಗೊಂಡಿತು. ಸಂಜೆಯ ವೇಳೆಗೆ ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಹಲವೆಡೆ ಕಿರು ಸೇತುವೆಗಳು ಜಲಾವ್ರತವಾಗಿವೆ.
ಮುತ್ತೋಡಿ ವ್ಯಾಪ್ತಿಯ ಮಲಗಾರು ಗ್ರಾಮದ ಸಂಪರ್ಕ ಸೇತುವೆ ಮೇಲೆ ಮಳೆಯ ನೀರು ಹರಿಯುತ್ತಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿದೆ. ಸ್ಥಳೀಯರು ವೃದ್ಧೆಯನ್ನು ಅಂಗೈಲಿ ಹೊತ್ತು ಸೇತುವೆಯನ್ನು ದಾಟಿದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮೂಡಿಗೆರೆಯಲ್ಲಿ ಬೆಳಿಗ್ಗೆ ಮಳೆ ಬಿಡುವು ನೀಡಿತಾದರೂ ಸಂಜೆಯ ನಂತರ ಆರಂಭಗೊಂಡಿತು. ಬಹುತೇಕ ಕಡೆಯಲ್ಲಿ ಗುಡುಗು ಸಹಿತ ಮಳೆ ಬಂದಿದೆ. ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಕಳಸ ತಾಲೂಕುಗಳಲ್ಲೂ ಭಾನುವಾರವೂ ಗುಡುಗು ಸಹಿತ ಮಳೆ ಮುಂದುವರೆದಿತ್ತು. ಗುಡುಗು ಸಹಿತ ಮಳೆಯಿಂದಾಗಿ ಜಿಲ್ಲೆ ತತ್ತರಿಸುತ್ತಿದೆ.
Due to torrential rains in the district paddy fields are flooded