ಚಿಕ್ಕಮಗಳೂರು: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ರವರು ಸ್ಥಾಪನೆ ಮಾಡಿದ್ದ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಸಮಿತಿ ರಚಿಸಿದ್ದು, ಅಧ್ಯಕ್ಷರಾಗಿ ವಕೀಲ ಅನೀಲ್ ಕುಮಾರ್ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಶಿವರಾಜ್ ಅವರು ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ಈ ಸಂಸ್ಥೆಯನ್ನು ಸ್ಥಾಪನೆ ಮಾಡಲು ಉದ್ದೇಶಿಸಿದ್ದು, ಜಿಲ್ಲಾ ಮಟ್ಟದಲ್ಲಿ ಪೂರ್ಣ ಪ್ರಮಾಣದ ಸಮಿತಿಯನ್ನು ನಿನ್ನೆ ತೇಗೂರಿನ ಬುದ್ಧ ವಿಹಾರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ ಎಂದರು.
ಈ ಜಿಲ್ಲಾ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಕೆ.ಸಿ ವಸಂತಕುಮಾರ್, ಖಜಾಂಚಿ ವಕೀಲ ರಮೇಶ್, ಪ್ರಧಾನ ಕಾರ್ಯದರ್ಶಿ ನಿವೃತ್ತ ಶಿಕ್ಷಕ ಪ್ರಕಾಶ್, ಕಾರ್ಯದರ್ಶಿಯಾಗಿ ಹುಣಸೇಮಕ್ಕಿ ಲಕ್ಷ್ಮಣ ಹಾಗೂ ಸದಸ್ಯರಾಗಿ ಧರ್ಮೇಶ್, ಪುಟ್ಟಸ್ವಾಮಿ, ಹೊನ್ನೇಶ್, ಮರ್ಲೆ ಅಣ್ಣಯ್ಯ, ಜೆ.ಡಿ ಲೋಕೇಶ್, ಹಾಲಪ್ಪ, ಗಿರೀಶ್ ಇವರುಗಳನ್ನು ಆಯ್ಕೆಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಸಮಿತಿಯು ನಗರ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸುವ ಮೂಲಕ ಬುದ್ಧ ಧಮ್ಮ ಕಾರ್ಯಚಟುವಟಿಕೆಗಳನ್ನು ರಾಷ್ಟ್ರವ್ಯಾಪಿ ನಡೆಸಲು ಉದ್ದೇಶಿಸಲಾಗಿದೆ ಎಂದರು.
೨೫೦೦ ವರ್ಷಗಳ ಹಿಂದಿನ ಭಗವಾನ್ ಮಹಾ ಬುದ್ಧರು ಆರಂಭಿಸಿದ್ದ ಬೌದ್ಧ ಧಮ್ಮ ಪ್ರಕೃತಿ ಧಮ್ಮವಾಗಿದ್ದು, ಮಾನವತೆಯನ್ನು, ಶಾಂತಿಯನ್ನು ಸಾರುವ ಏಕೈಕ ಧಮ್ಮವಾಗಿದೆ. ಜಾತಿ, ಮತ, ಯಾವುದೇ ಭೇದ-ಭಾವವಿಲ್ಲದೆ ಪ್ರೀತಿ, ಮೈತ್ರಿ, ಗೌರವ, ಕರುಣೆ ಅನುಸರಿಸುವ ಯಾರಿಗೂ ಕೆಡುಕನ್ನುಂಟು ಮಾಡದ ಒಳ್ಳೆಯದನ್ನೇ ಮಾಡುವ ಮನಸ್ಥಿತಿಯ ಸಂದೇಶವಾಗಿದೆ ಎಂದು ತಿಳಿಸಿದರು.
ಅಪಾರ ಅಧ್ಯಯನದ ನಂತರ ಡಾ. ಬಿ.ಆರ್ ಅಂಬೇಡ್ಕರ್ರವರು ಬೌದ್ಧ ಧಮ್ಮವನ್ನು ಸ್ವೀಕರಿಸುವ ತೀರ್ಮಾನ ಮಾಡಿ ೧೯೩೪ ರಲ್ಲಿ ಭೌದ್ಧ ಧಮ್ಮದ ದೀಕ್ಷೆ ಸ್ವೀಕರಿಸಿ ಎಲ್ಲಾ ಭಾರತೀಯರನ್ನು ಬೌದ್ಧ ಧಮ್ಮದ ಮಾರ್ಗದಲ್ಲಿ ನಡೆಸುವ ದೀಕ್ಷೆ ಕೈಗೊಂಡರು ಎಂದು ವಿವರಿಸಿದರು.
೧೯೫೬ ರಲ್ಲಿ ಬೌದ್ಧ ಮಹಾಸಭಾ ಸ್ಥಾಪಿಸಿ ಸ್ವತಹಾ ಅಂಬೇಡ್ಕರ್ರವರೇ ಎರಡು ವರ್ಷಗಳ ಕಾಲ ಮುನ್ನಡೆಸಿ ರಾಷ್ಟ್ರಮಟ್ಟ ಹಾಗೂ ಎಲ್ಲಾ ರಾಜ್ಯಗಳಲ್ಲಿ ಸಂಸ್ಥೆಗಳನ್ನು ರಚಿಸಿದ್ದರು. ಕರ್ನಾಟಕ ರಾಜ್ಯ ಸಮಿತಿಯು ಎಲ್ಲಾ ಜಿಲ್ಲೆಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ಈ ಸಂಸ್ಥೆಯ ಶಾಖೆಗಳನ್ನು ಆರಂಭಿಸುವ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ, ತಾಲ್ಲೂಕು, ಗ್ರಾಮ ಮಟ್ಟದವರೆಗೆ ಬೌದ್ಧ ಧಮ್ಮ ಸಂಸ್ಥೆಗಳನ್ನು ಆರಂಭಿಸುವ ಜೊತೆಗೆ ಮುಂದಿನ ಡಿಸೆಂಬರ್ ೧೫ ರಂದು ಬೆಂಗಳೂರಿನ ಸ್ಪೂರ್ತಿಧಾಮ ಆವರಣದಲ್ಲಿ ಬೃಹತ್ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಈ ಸಮ್ಮೇಳನದಲ್ಲಿ ಬೌದ್ಧ ಧಮ್ಮ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ಹೇಳಿದರು.
ಈ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಧಮ್ಮ ಚಟುವಟಿಕೆಯಲ್ಲಿ ಭಾಗಿಗಳಾಗುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಕೋಶಾಧ್ಯಕ್ಷ ಅರ್ಜುನ್ ರಾವ್ ಕೇಸರಿ ಸೇರಿದಂತೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು
Formation of District Committee of Indian Buddhist Mahasabha