ಚಿಕ್ಕಮಗಳೂರು: ರೈತರ ಉಪ ಕಸುಬಾದ ಹೈನುಗಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಹೊಸ ಹೊಸ ತಳಿಗಳನ್ನು ಸಂಶೋಧನೆ ಮಾಡಿ ರಾಸುಗಳ ರಕ್ಷಣೆಗೆ ಮುಂದಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಸಮೀಪದ ತೇಗೂರು ಗ್ರಾ.ಪಂ ವ್ಯಾಪ್ತಿಯ ನಲ್ಲೂರಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ತಾಲ್ಲೂಕು ಪಂಚಾಯಿತಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಆರನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರ ಜೀವನಾಡಿಯಾಗಿರುವ ಪಶುಸಂಗೋಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಹೊಸ ಹೊಸ ತಳಿಗಳನ್ನು ಸಂಶೋಧಿಸಿ ರಕ್ಷಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ರಾಸುಗಳಿಗೆ ಕಾಲುಬಾಯಿ ರೋಗದ ಲಸಿಕೆಯನ್ನು ಹಾಕಿಸುವ ಮೂಲಕ ಅವುಗಳ ರಕ್ಷಣೆ ಮಾಡಬೇಕೆಂದು ಹೇಳಿದರು.
ಕೃಷಿಯ ಜೊತೆಗೆ ಉಪ ಕುಸುಬಾಗಿ ಹೈನುಗಾರಿಕೆಯನ್ನು ಪ್ರಾರಂಭಿಸಿದರೆ ರೈತರ ಆರ್ಥಿಕ ಮಟ್ಟ ಸುಧಾರಿಸುತ್ತದೆ. ಆದ್ದರಿಂದ ಗೋವುಗಳನ್ನು ಹೊಂದಿರುವ ರೈತರು ಉದಾಸೀನತೆ ತಾಳದೆ ಲಸಿಕೆಯನ್ನು ಹಾಕಿಸುವ ಮೂಲಕ ಕಾಲುಬಾಯಿ ರೋಗ ಸಂಪೂರ್ಣ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ದೇಶದಲ್ಲೇ ಕರ್ನಾಟಕ ರಾಜ್ಯ ಹಸುಗಳಿಗೆ ಲಸಿಕೆ ಹಾಕುವ ಆರನೇ ಸುತ್ತಿನ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮಿಶ್ರ ಬೆಳೆಯ ಜೊತೆಗೆ ಹೈನುಗಾರಿಕೆಯನ್ನು ಮುಂದುವರೆಸುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಕರೆನೀಡಿದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದರಿಂದ ಕೆಎಂಎಫ್ ಮೂಲಕ ವಿದೇಶಗಳಿಗೆ ಹಾಲನ್ನು ರಫ್ತು ಮಾಡಲು ಪ್ರಸ್ತಾವನೆಯನ್ನು ಸಿದ್ದಪಡಿಸಲಾಗುತ್ತಿದೆ. ಇದು ಸಮರ್ಪಕವಾಗಿ ಆದಾಗ ರೈತರಿಗೆ ಹೆಚ್ಚು ಸಹಾಯಧನ ಸಿಗುತ್ತದೆ ಎಂದು ಹೇಳಿದರು.
ಜಿಲ್ಲೆಗೆ ಪ್ರತ್ಯೇಕ ಡೈರಿ ಸ್ಥಾಪನೆ ಬಗ್ಗೆ ಸರ್ಕಾರ ಈಗಾಗಲೇ ಸಂಬಂಧಿಸಿದ ಇಲಾಖೆಗೆ ಸರ್ವೆ ಮಾಡಲು ಸೂಚನೆ ನೀಡಿದೆ. ಹೆಚ್ಚು ಹಾಲು ಉತ್ಪಾದನೆಯಾದ ವರದಿ ಬಂದರೆ ಪ್ರತ್ಯೇಕ ಡೈರಿ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿದ ಅವರು, ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಮೋಹನ್ಕುಮಾರ್ ಮಾತನಾಡಿ, ಎಲ್ಲಾ ರಾಸುಗಳಿಗೆ ವ್ಯಾಕ್ಸಿನ್ ಹಾಕಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಹಿಂದೆ ಕಾಲುಬಾಯಿ ರೋಗ ಹೆಚ್ಚಾಗಿ ಬರುತ್ತಿತ್ತು, ಇಲಾಖೆ ಈಗ ಲಸಿಕೆ ನೀಡುತ್ತಿರುವುದರಿಂದ ನಿಯಂತ್ರಣದಲ್ಲಿದೆ. ಮುಂದಿನ ೧೫ ದಿನಗಳಲ್ಲಿ ರಾಷ್ಟ್ರೀಯ ಜನಗಣತಿ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಹೇಮಂತ್ಕುಮಾರ್ ತೇಗೂರು ಗ್ರಾ.ಪಂ ಅಧ್ಯಕ್ಷೆ ರಾಧ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯ ಪವನ್, ಶಾಂತಕುಮಾರ್, ಜಯರಾಜ್ ಅರಸ್, ಡಾ. ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
Sixth round of free foot and mouth vaccination campaign launched