ಚಿಕ್ಕಮಗಳೂರು: ಕನ್ನಡರಾಜ್ಯೋತ್ಸವ ದಿನದಂದು ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ಮಾಡದಿದ್ದಲ್ಲಿ ಕನ್ನಡ ಸೇನೆ ಮತ್ತು ಕನ್ನಡಪರ ಸಂಘಟನೆಗಳು ಅದೇ ಸಮಯದಲ್ಲಿ ಕನ್ನಡ ಧ್ವಜ ಹಾರಿಸಲಿವೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.
ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ ಭಾಷೆ ಸಂಸ್ಕೃತಿ ಉಳಿವಿಗೆ ಹೋರಾಟ ಮಡುತ್ತಾ ಬಂದಿರುವ ಕನ್ನಡ ಸೇನೆ ಜಿಲ್ಲಾಡಳಿತದ ಮುಂದೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾಡಳಿತ ಕಡ್ಡಾಯವಾಗಿ ಕನ್ನಡ ಧ್ವಜಾರೋಹಣ ಮಾಡಬೇಕು. ಒಂದು ವೇಳೆ ಧ್ವಜ ಹಾರಿಸದೆ ಇದ್ದಲ್ಲಿ ಕನ್ನಡ ಸೇನೆ ಮತ್ತುಇತರೆ ಕನ್ನಡಪರ ಸಂಘಟನೆಗಳು ಸೇರಿ ಸ್ಥಳದಲ್ಲಿ ಕನ್ನಡ ಧ್ವಜಾರೋಹಣ ಮಾಡಲಾಗುವುದು ಎಂದರು.
ಕನ್ನಡ ಸೇನೆ ಮುಖಂಡ ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ, ಕನ್ನಡ ಭುವನೇಶ್ವರಿ ಮೆರವಣಿಗೆಯಲ್ಲಿ ಆಟೋಚಾಲಕರು, ಕನ್ನಡಪರ ಸಂಘಟನೆಯ ಕಾರ್ಯಕರ್ತರು ಬೇಕು. ಆದರೆ, ವೇದಿಕೆ ಕಾರ್ಯಕ್ರಮದಲ್ಲಿ ಅವರಿಗೆ ಕನಿಷ್ಠ ಒಂದು ಅಭಿನಂದನೆಯನ್ನೂ ಹೇಳುವುದಿಲ್ಲ. ಕೂರಲು ಆಸನದ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಈಬಾರಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ಜನಪರ ಹೋರಾಟಗಾರರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಿ ಗೌರವಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ವರ್ಷದಿಂದ ಮತ್ತೆ ಮುಂದುವರಿಸಬೇಕು. ಕನ್ನಡ ನಾಮಫಲಕಗಳನ್ನು ಶೇ.೬೦:೪೦ ರ ಅನುಪಾತದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಹಾಕುವುದು ಕಡ್ಡಾಯವಾಗಬೇಕು ಎಂದು ಒತ್ತಾಯಿಸಿದರು. ಕನ್ನಡ ಸೇನೆ ಮುಖಂಡರಾದ ರವಿಕಳವಾಸೆ, ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಾ, ಶಿವಕುಮಾರ್, ಜಯಪ್ರಕಾಶ್ ಮತ್ತಿತರರಿದ್ದರು.
Demand for hoisting Kannada flag by district administration for Rajyotsava