ಚಿಕ್ಕಮಗಳೂರು: ಕೇಂದ್ರ ಸರ್ಕಾರಕ್ಕೆ ಅತೀ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿರುವ ಕಾಫಿ ಉದ್ಯಮ ಅತೀವೃಷ್ಟಿ ಹಾನಿಯಿಂದಾಗಿ ಸಂಕಷ್ಟದಲ್ಲಿ ಇದ್ದು, ಕೂಡಲೇ ರೈತರು ಮತ್ತು ಕಾಫಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ವಿದರ್ಭ ಪ್ಯಾಕೇಜ್ ಘೋಷಣೆ ಮಾಡಿ ಪರಿಹಾರ ನೀಡಿದ್ದರು. ಅದೇ ಮಾದರಿಯಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಕಾಫಿ ಬೆಳೆಗಾರರು ಮತ್ತು ರೈತರ ಸಂಪೂರ್ಣ ಸಾಲ ಮನ್ನ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ವಾಡಿಕೆಗಿಂತ ಮಳೆಯಾಗುತ್ತಿರುವುದರಿಂದ ಕಾಫಿ, ಅಡಿಕೆ, ಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳು ನಿರೀಕ್ಷೆಗಿಂತ ಮೀರಿ ಹೆಚ್ಚು ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಬೆಳೆಗಾರರಿಗೆ ಸರ್ಫೇಸಿ ಕಾಯಿದೆಯಡಿ ನೋಟಿಸ್ ನೀಡಿ ಸಾಲ ವಸೂಲಾತಿಗೆ ಮುಂದಾಗಿರುವುದನ್ನು ಖಂಡಿಸಿದರು.
ಕಾಫಿ ಬೆಳೆಗಾರರಿಗೆ ಕರಾಳ ಶಾಸನವಾಗಿರುವ ಸರ್ಫೇಸಿ ಕಾಯಿದೆಯನ್ನು ಕೂಡಲೇ ರದ್ದು ಮಾಡಬೇಕು, ಕೇಂದ್ರ ಸರ್ಕಾರ ಅವೈಜ್ಞಾನಿಕ ಮತ್ತು ಅನುಭವದ ಕೊರತೆ ಇರುವುದರಿಂದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಸರ್ಫೇಸಿ ಕಾಯಿದೆ ಬಗ್ಗೆ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡುವುದು ಜನರ ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೈತರ ಕೃಷಿ ಮೇಲೆ ಸರ್ಫೇಸಿ ಕಾಯಿದೆಯನ್ನು ಜಾರಿಗೆ ತಂದರು. ಆ ಸಂದರ್ಭದಲ್ಲಿ ಕೇರಳ ಸೇರಿದಂತೆ ಕಾಫಿ ಬೆಳೆಯುವ ರಾಜ್ಯಗಳು ವಿರೋಧಿಸಿದ್ದವು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದಕ್ಕೆ ಅನುಮೋದನೆ ನೀಡಿತು ಎಂದು ಲೇವಡಿ ಮಾಡಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಲ್ಲಿ ಬೆಳೆಗಾರರ ಪರವಾಗಿ ನಾಟಕವಾಡುತ್ತಿರುವುದನ್ನು ನಿಲ್ಲಿಸಿ ಕೇಂದ್ರದ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಕೇವಲ ಸರ್ಕಾರಕ್ಕೆ ಮನವಿ ಕೊಡುವುದನ್ನು ಬಿಟ್ಟು ಚಳುವಳಿ ರೂಪಿಸುವಂತೆ ತಿಳಿಸಿದ್ದೇವೆ ಆದರೂ ಪ್ರತಿಭಟನೆ ಮಾಡದಿರುವ ಪರಿಣಾಮ ಬ್ಯಾಂಕ್ಗಳು ಸರ್ಫೇಸಿ ಕಾಯಿದೆಯಡಿ ಬೆಳೆಗಾರರಿಗೆ ನೋಟೀಸ್ ನೀಡಿ ಆಸ್ತಿ ಹರಾಜು ಹಾಕಲು ಮುಂದಾಗಿದೆ ಎಂದರು.
ಬೆಳೆಗಾರರಿಗೆ ಕರಾಳ ಶಾಸನವಾಗಿರುವ ಸರ್ಫೇಸಿ ಕಾಯಿದೆಯಿಂದ ಸಾವಿರಾರು ರೈತರು ಮತ್ತು ಕಾಫಿ ಬೆಳೆಗಾರರು ಸರಣಿ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಧಾವಿಸದಿದ್ದರೆ ಇದರ ಪರಿಣಾಮ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಸದರು ಸ್ಪಂದಿಸಿ ಕೆಲಸ ಮಾಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಅಭಿವೃದ್ಧಿಗೋಸ್ಕರ ರಾಜ್ಯ ಸರ್ಕಾರದೊಂದಿಗೆ ಬೆಂಬಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿಕೆ ನೀಡಿರುವುದು ಹತಾಶೆಯ ಹೇಳಿಕೆಯಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದು, ಪ್ರಗತಿಯತ್ತ ಸಾಗುತ್ತಿರುವುದನ್ನು ಸಹಿಸದೆ ಸಿ.ಟಿ ರವಿ ಅವರು ಬೆಂಗಳೂರಿನಲ್ಲಿ ವಿರುದ್ಧ ಹೇಳಿಕೆ, ಚಿಕ್ಕಮಗಳೂರಿನಲ್ಲಿ ಪರ ಹೇಳಿಕೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಇಂದಾವರ ಲೋಕೇಶ್, ಶಾಂತಕುಮಾರ್ ಉಪಸ್ಥಿತರಿದ್ದರು.
The central government should rush to save the distressed coffee industry