ಚಿಕ್ಕಮಗಳೂರು: ಅತಿಯಾದ ಮಳೆ ಹಾಗೂ ಇನ್ನಿತರ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರುವಾಗ ರೆಸಾರ್ಟ್ ಮಾಲೀಕರ ಅಭಿಪ್ರಾಯ ಕೇಳುವ ಮೂಲಕ ನಿಬಂಧನೆ ವಿಧಿಸಬೇಕು ಎಂದು ರೆಸಾರ್ಟ್ ಮಾಲಿಕರ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಎಸ್.ಎನ್ ಜಿಲ್ಲೆಗೆ ಬರುವ ಪ್ರವಾಸಿಗರನ್ನು ನಿರ್ಬಂಧಿಸುವಾಗ ಜಿಲ್ಲೆಗೆ ಬರಬಾರದೆಂಬ ಮಾಹಿತಿ ಹೆಚ್ಚು ಪ್ರಚಾರವಾಗುತ್ತಿದ್ದು, ಇದರಿಂದ ಪ್ರವಾಸಿಗರಿಗೂ ತೊಂದರೆಯಾಗುತ್ತದೆ ಹಾಗೂ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡಿರುವ ರೆಸಾರ್ಟ್, ಹೋಂಸ್ಟೇ, ಹೋಟೆಲ್ ಉದ್ಯಮಕ್ಕೂ ತೊಂದರೆಯಾಗಲಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆ ಭೌಗೋಳಿಕವಾಗಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದು, ಪ್ರಕೃತಿ ವಿಕೋಪಕ್ಕೆ ಒಳಗಾಗುವ ಸೂಕ್ಷ್ಮ ಪ್ರದೇಶಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಹೊರಡಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪ್ರವಾಸೋದ್ಯಮ ಈ ಜಿಲ್ಲೆಯ ಪ್ರಮುಖ ಅಭಿವೃದ್ಧಿಯ ಮೂಲವಾಗಿದ್ದು, ಸರಾಸರಿ ತಿಂಗಳಿಗೆ ೩ ರಿಂದ ೩.೫೦ ಕೋಟಿ ರೂ. ಮೊತ್ತದ ಹಣ ಜಿಎಸ್ಟಿ ಮೂಲಕ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ರೆಸಾರ್ಟ್ ಹಾಗೂ ಹೋಟೆಲ್ ಉದ್ಯಮದಿಂದ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಪಾವತಿಯಾಗುತ್ತಿದ್ದು, ಪ್ರವಾಸಿಗರನ್ನು ಸಂಪೂರ್ಣವಾಗಿ ನಿರ್ಬಂಧಿಸಿದರೆ ರೆಸಾರ್ಟ್ ಹಾಗೂ ಹೋಟೆಲ್ ಉದ್ಯಮಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.
ಅಪಾರ ಪ್ರಮಾಣದ ಬಂಡವಾಳ ಹೂಡಿ ರೆಸಾರ್ಟ್ ಹಾಗೂ ಹೋಟೆಲ್ ನಡೆಸುತ್ತಿದ್ದು ಪ್ರವಾಸಿಗರು ಬರದಿದ್ದರೆ ವ್ಯಾಪಾರಕ್ಕೆ ಧಕ್ಕೆಯಾಗುತ್ತದೆ. ಇದರಿಂದ ರೆಸಾರ್ಟ್ ಮಾಲೀಕರು ಸಂಕಷ್ಟಕ್ಕೊಳಗಾಗಲಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ರೆಸಾರ್ಟ್ಗಳ ಬಗ್ಗೆಯೂ ಜಿಲ್ಲಾಡಳಿತದ ಸಹಕಾರ ಮುಖ್ಯವಾಗುತ್ತದೆ ಎಂದು ಮನವಿ ಮಾಡಿದರು.
ಮಳೆ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎಲ್ಲಾ ಭಾಗದಲ್ಲಿಯೂ ತೊಂದರೆಯಾಗುವುದಿಲ್ಲ. ಗಿರಿ ಪ್ರದೇಶಗಳನ್ನು ಹೊರತುಪಡಿಸಿ ಬಯಲು ಪ್ರದೇಶದಲ್ಲಿರುವ ಬೆಳವಾಡಿ ಸೇರಿದಂತೆ ಇನ್ನಿತರ ಪ್ರವಾಸಿ ಸ್ಥಳದಲ್ಲಿ ಅಪಾಯದ ಪರಿಸ್ಥಿತಿ ಎದುರಾಗುವುದಿಲ್ಲ. ಇದನ್ನು ಪರಿಗಣಿಸದೆ ಜಿಲ್ಲೆಗೆ ಬರುವ ಎಲ್ಲಾ ಪ್ರವಾಸಿಗರಿಗೆ ನಿರ್ಬಂಧ ಹೇರಿದರೆ ರೆಸಾರ್ಟ್ ಉದ್ಯಮಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಎಂದರು.
ಮುಂದೆ ಈ ರೀತಿಯ ಆದೇಶ ಹೊರಡಿಸುವಾಗ ರೆಸಾರ್ಟ್ ಮಾಲೀಕರ ಅಭಿಪ್ರಾಯವನ್ನು ಪರಿಗಣಿಸಿ ಆದೇಶಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಹೇಮಂತ್ಕುಮಾರ್, ಜಂಟಿ ಕಾರ್ಯದರ್ಶಿ ಪರಮೇಶ್ ಕೀರ್ತಿ, ಖಜಾಂಚಿ ಚೇತನ್ ಎಂ.ಪಿ, ಕಾರ್ಯದರ್ಶಿ ರಂಗರಾಜ್ ಹಾಗೂ ಆನಂದ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Appeal to restrict tourists to sensitive areas only