ಚಿಕ್ಕಮಗಳೂರು: ಈ ಬಾರಿಯ ೨೧ನೇ ದತ್ತಮಾಲಾ ಅಭಿಯಾನವನ್ನು ವಿಶೇಷವಾಗಿ ನಡೆಸಲು ಚಿಂತನೆ ನಡೆಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪದಾಧಿಕಾರಿಗಳು ಈಗಾಗಲೇ ೨೬ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವ್ಯಾಪಕ ಪ್ರಚಾರ ನಡೆಸಿದ್ದಾರೆ. ನಾನೆ ೧೩ ಜಿಲ್ಲೆ ಪ್ರವಾಸ ಮಾಡಿದ್ದೇನೆ. ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನ ರಾಜ್ಯದಲ್ಲಿ ಈ ಬಾರಿ ಸಂಚಲನ ಉಂಟು ಮಾಡಲಿದೆ ಎಂದು ಹೇಳಿದರು.
ನ.೪ಕ್ಕೆ ನಗರದಲ್ಲಿ ದತ್ತಮಾಲಾಧಾರಣೆ ನಡೆಯಲಿದೆ. ಅ.೭ ರಂದು ದತ್ತದೀಪೋತ್ಸವ, ೯ಕ್ಕೆ ಪಡಿಸಂಗ್ರಹ, ನ.೧೦ಕ್ಕೆ ಧರ್ಮಸಭೆ, ಶೋಭಾಯಾತ್ರೆಯ ನಂತರ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನದ ನಂತರ ನಡೆಯುವ ಹೋಮಹವನದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ತೆಲಂಗಾಣದಲ್ಲಿ ಓವೈಸಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಧವಿ ಲತಾ, ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ದೀಪಕ್ ದೊಡ್ಡಯ್ಯ ಮತ್ತಿತರೆ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದತ್ತಪೀಠದಲ್ಲಿರುವ ಗೋರಿಗಳು ನಾಗೇನಹಳ್ಳಿಗೆ ಸ್ಥಳಾಂತರವಾಗಬೇಕು. ಇಸ್ಲಾಂ ಕುರುಹುಗಳು ಅಲ್ಲಿರಬಾರದು ಇಸ್ಲಾಂ ಚಟುವಟಿಕೆಗಳಿಗೆ ದತ್ತಪೀಠದಲ್ಲಿ ಅವಕಾಶ ನೀಡಬಾರದು, ಅಲ್ಲಿ ಈಗ ತ್ರಿಕಾಲ ಪೂಜೆ ನಡೆಯುತ್ತಿದೆ ಆದರೆ, ಪ್ರಸಾದ ವ್ಯವಸ್ಥೆ ಇಲ್ಲ, ಅಗತ್ಯ ಮೂಲಸೌಕರ್ಯಗಳಿಲ್ಲ. ಸಾಕಷ್ಟು ನಿರ್ಬಂಧನೆ ವಿಧಿಸಿರುವ ಜಿಲ್ಲಾಡಳಿತ ಸಕಲ ಸೌಲಭ್ಯಗಳ ಜತೆಗೆ ಉಪಹಾರದ ವ್ಯವಸ್ಥೆಯನ್ನು ದತ್ತಪೀಠದಲ್ಲಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಭಾಗೀಯ ಅಧ್ಯಕ್ಷ ರಂಜಿತ್ಶೆಟ್ಟಿ, ಮುಖಂಡರಾದ ಸುಂದರೇಶ್, ಯೋಗೀಶ್ಸಂಜಿತ್ ಸುವರ್ಣ, ರಾಜೇಂದ್ರಕುಮಾರ್, ಜಿಲ್ಲಾಧ್ಯಕ್ಷ ಅರ್ಜುನ್, ದುರ್ಗಾಸೇನೆ ನವೀನಾ, ರವಿ, ನಾಗರಾಜ್ ಮತ್ತಿತರರಿದ್ದರು.
Dattamala Abhiyan is thought to be conducted specially