ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕುಂಟಿತವಾಗಿಲ್ಲ. ಐದೂ ಗ್ಯಾರಂಟಿಗಳಿಂದ ಜನ ಖುಷಿಯಾಗಿದ್ದಾರೆ. ವಿರೋಧ ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ತಾಲ್ಲೂಕಿನ ಈಶ್ವರಳ್ಳಿ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಅವರು ಭಾನುವಾರ ಬಾಗೀನ ಅರ್ಪಿಸಿ ನಂತರ ಮಾತನಾಡಿ ಪ್ರತಿ ಗ್ರಾ.ಪಂ.ಗಳಿಗೆ ೩೦ ರಿಂದ ೪೦ ಲಕ್ಷ ರೂ.ನಂತೆ ಒಟ್ಟು ೧೫ ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಈಶ್ವರಹಳ್ಳಿ ಗ್ರಾ.ಪಂ. ಒಂದಕ್ಕೆ ೨ ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಕ್ಷೇತ್ರದ ೩೪ ಗ್ರಾ.ಪಂ.ಗೆ ೨೫ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಲಾಗಿದೆ. ಮುಂದಿನ ದಿನದಲ್ಲಿ ನಗರದಲ್ಲೂ ರಸ್ತೆಗಳ ದುರಸ್ಥಿ ಕಾರ್ಯ ನಡೆಯಲಿದೆ. ಯುಜಿಡಿ ಮತ್ತು ಅಮೃತ್ ಕಾಮಗಾರಿಗಳಿಂದಾಗಿ ರಸ್ತೆಗಳು ಹದಗೆಟ್ಟಿವೆ ಅದನ್ನು ಸರಿಪಡಿಸಲು ನಮಗೊಂದಿಷ್ಟು ಸಮಯ ಬೇಕಾಗುತ್ತದೆ. ಅವರು ೨೦ ವರ್ಷದಲ್ಲಿ ಹಾಳು ಮಾಡಿರುವುದನ್ನು ನಾವು ೧೮ ತಿಂಗಳಲ್ಲಿ ಸರಿಪಡಿಸಲಿಲ್ಲ ಎಂದರೆ ಹೇಗೆ ಎಂದರು.
ನಮಗೆ ಇನ್ನೂ ಮೂರೂವರೆ ವರ್ಷ ಅವಧಿ ಇದೆ. ಅವರು ಯುಜಿಡಿ, ಅಮೃತ್ ಕಾಮಗಾರಿ ಮುಗಿಸಿಲ್ಲ. ಅದನ್ನು ಪೂರ್ಣಗೊಳಿಸುವ ಕೆಲಸವನ್ನೂ ನಾವು ಮಾಡೇ ಮಾಡುತ್ತೇವೆ. ಹಿಂದಿನ ಸರ್ಕಾರ ೭೦ ಸಾವಿರ ಕೋಟಿ ರೂ. ಸಾಲ ಮಾಡಿ ನಮ್ಮ ಮೇಲೆ ಹೊರಿಸಿ ಹೋಗಿದ್ದಾರೆ ಅದನ್ನು ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ರೈತರಿಗೆ ಮೊದಲು ಕೆರೆ ತುಂಬಿಸುವ ಜೊತೆಗೆ ನಿರಂತರ ವಿದ್ಯುತ್ ನೀಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ. ಶೋಷಿತರು, ಬಡವರು ಸಮಾಜದ ಮುನ್ನೆಲೆಗೆ ಬರಬೇಕು ಎನ್ನುವ ಸದುದ್ದೇಶ ಹೊಂದಿದೆ ಎಂದರು.
ಎತ್ತಿನ ಹೊಳೆ ಯೋಜನೆಯಲ್ಲಿ ದೇವನೂರು, ಮಾಚೇನಹಳ್ಳಿ, ಬೆಳವಾಡಿ ಕೆರೆಗಳು ಇರಲಿಲ್ಲ. ಆದರೆ ಎತ್ತಿನ ಹೊಳೆ ಉದ್ಘಾಟನೆ ಸಂದರ್ಭದಲ್ಲಿ ಹಳೇ ಬೀಡು ಭಾಗದಲ್ಲಿ ಸ್ವಲ್ಪ ತೊಂದರೆ ಆದ ಕಾರಣ ನಮ್ಮೆಲ್ಲರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಳೇಬೀಡು ಕೆರೆಗೆ ನೀರು ಹರಿಸಲು ಒಪ್ಪಿದ ಪರಿಣಾಮ ಇಂದು ಕಳಸಾಪುರ, ಬೆಳವಾಡಿ ಕೆರೆಗಳು ತುಂಬಿ ಸಂವೃದ್ಧಿ ಆಯಿತು ಎಂದರು.
ಕರಗಡ ಯೋಜನೆಯ ಕೆಲವು ಅಡೆತಡೆಗಳನ್ನು ನಿವಾರಿಸಿದ ಪರಿಣಾಮ ಇಂದು ತಿಮ್ಮಪ್ಪರಾಯನ ಕೆರೆ, ಈಶ್ವರಹಳ್ಳಿ ಕರೆ ಹಾಗೂ ಕಳಸಾಪುರ ಕೆರೆಗಳು ಭರ್ತಿಯಾಗಿದೆ. ಈ ಯೋಜನೆಗಾಗಿ ಹೋರಾಟ ಮಾಡಿದವರನ್ನೆಲ್ಲಾ ಈ ಸಂದರ್ಭದಲ್ಲಿ ನೆನೆಯುತ್ತೇವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಹಿಂದೆ ೨೦೧೩ ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಹೆಚ್ಚು ಅನುದಾನ ಕೊಟ್ಟು ಕರಗಡ ಯೋಜನೆಯನ್ನು ಪೂರ್ಣಗೊಳಿಸಬೇಕೆನ್ನುವ ಕಾಳಜಿ ತೋರಿದ್ದರ ಫಲವಾಗಿ ಇಂದು ಈ ಭಾಗದ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ೬೩ ಹಳ್ಳಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ಕರಗಡ ಯೋಜನೆ ಕಾಮಗಾರಿ ನಿಗಧಿತ ಸಮಯದಲ್ಲಿ ಪೂರ್ಣಗೊಂಡಿದ್ದರೆ ಈ ಭಾಗದ ರೈತರೆಲ್ಲರೂ ಶ್ರೀಮಂತರಾಗಿರುತ್ತಿದ್ದರು. ಆದರೆ ಅದು ಸಾಧ್ಯವಾಗದೆ ರೈತರು ಕಣ್ಣೀರಿಡುವಂತಾಗಿತ್ತು. ಈಗ ತಡವಾಗಿಯಾದರೂ ನೀರು ಹರಿದು ಕೆರೆಗಳು ತುಂಬುವಂತಾಗಿದೆ. ಈ ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಸಂಸ್ಕರಣಾ ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿ ಕೆರೆ, ಕಟ್ಟೆಗಳು ಬರಿದಾದ ಪರಿಣಾಮ ಬೆಳವಾಡಿ, ಕಳಸಾಪುರ ದಭಾಗದ ಜನರು ಬೆಂಗಳೂರು ಇನ್ನಿತರೆ ಭಾಗಕ್ಕೆ ಕೆಲಸ ಅರಸಿ ಹೋಗಿದ್ದರು. ಇದೀಗ ಕೆರೆಗಳು ತುಂಬಿರುವುದರಿಂದ ಮತ್ತೆ ಹಿಂತಿರುಗಿ ಬರುವಂತಾಗಿದೆ ಎಂದು ತಿಳಿಸಿದರು.
ಬಗರ್ಹುಕ್ಕುಂ ಸಮಿತಿ ಸದಸ್ಯ ಕೆಂಗೇಗೌಡ, ಶಂಕರ್ ನಾಯಕ್, ಜಿ.ಪಂ. ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಯೋಗೀಶ್, ಅಚ್ಚುತ ರಾವ್, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.
Development has not slowed since the Congress government came to the state