ಚಿಕ್ಕಮಗಳೂರು: ತಾಲ್ಲೂಕು ಮಲ್ಲೇನಹಳ್ಳಿಯಲ್ಲಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ ಅ.೩೦ ರಿಂದ ನ.೩ ರವರೆಗೆ ನಡೆಯಲಿದ್ದು, ಲಕ್ಷಕ್ಕೂ ಅಧಿಕ ಭಕ್ತರು ಮತ್ತು ಸಾರ್ವಜನಿಕರು ಕಾಲ್ನಡಿಗೆಯಲ್ಲಿ ದೇವಿರಮ್ಮ ಬೆಟ್ಟವನ್ನು ಹತ್ತುವ ಮೂಲಕ ದರ್ಶನಕ್ಕೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮಅಮಟೆ ತಿಳಿಸಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಅ.೩೦ ರಂದು ಸಂಜೆ ೪ ಗಂಟೆಯಿಂದ ಭಕ್ತರು, ಸಾರ್ವಜನಿಕರು, ಮಹಿಳೆಯರು ಬೆಟ್ಟವನ್ನು ಹತ್ತಲು ಪ್ರಾರಂಭಿಸಿ, ಅ.೩೧ ರ ಸಂಜೆಯವರೆಗೆ ದೇವಿರಮ್ಮನವರ ದರ್ಶನ ಪಡೆಯುವ ಅಂಗವಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತುಗಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ಈ ಸಂಬಂಧ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ೫ ರಕ್ಷಣಾ ತಂಡಗಳನ್ನು ರಚಿಸಲಾಗಿದ್ದು, ೫೦೦ ಕ್ಕೂ ಹೆಚ್ಚು ಪೊಲೀಸರು, ೫೫೦ ಹೋಂಗಾರ್ಡ್ಸ್, ೫೦ ಜನ ಸಬ್ ಇನ್ಸ್ಪೆಕ್ಟರ್, ೧೦ ಇನ್ಸ್ಪೆಕ್ಟರ್, ಕೆಎಸ್ಆರ್ಪಿ, ಡಿಎಆರ್, ವಿಚಕ್ಷಣಾ ತಂಡ ಸೇರಿದಂತೆ ಸಿಸಿ ಟಿವಿ, ಡ್ರೋನ್ ಕ್ಯಾಮೆರಾದ ಮೂಲಕ ಚಿತ್ರೀಕರಣ ಮಾಡಲು ಸೂಚಿಸಲಾಗಿದೆ ಎಂದರು.
ಅಗ್ನಿಶಾಮಕ ಠಾಣೆಯಿಂದ ಬೆಟ್ಟ ಹತ್ತುವ ಭಕ್ತರಿಗೆ ರೋಪ್ವೇ ಅಳವಡಿಸಲಾಗಿದ್ದು, ಆರೋಗ್ಯ ಇಲಾಖೆ, ಚಿಕ್ಕಮಗಳೂರು ಅಡ್ವೆಂಚರ್ ಕ್ಲಬ್ ಇವರುಗಳ ಸಹಯೋಗವನ್ನು ಪಡೆದುಕೊಳ್ಳಾಗಿದ್ದು, ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ೫೦ ಹೆಚ್ಚುವರಿ ಬಸ್ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದೇವಿರಮ್ಮ ದೀಪೋತ್ಸವದ ಅಂಗವಾಗಿ ಮಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತ ೧೦ ಕಿ.ಮೀ ವರೆಗೆ ಅ.೩೦ರಂದು ಬೆಳಗ್ಗೆ ೬ ಗಂಟೆಯಿಂದ ಅ.೩೧ ರ ಬೆಳಗ್ಗೆ ೬ ಗಂಟೆವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದರು.
ಬಿಂಡಿಗ ಮಲ್ಲೇನಹಳ್ಳಿಯಲ್ಲಿ ತಜ್ಞ ವೈದ್ಯರುಗಳನ್ನೊಳಗೊಂಡ ಒಂದು ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲಾಗಿದ್ದು, ತುರ್ತು ಸೇವೆಗಾಗಿ ಒಟ್ಟು ೪ ಅಂಬುಲೆನ್ಸ್ಗಳನ್ನು ನಿಯೋಜನೆ ಮಾಡಿದ್ದು, ಈ ಪೈಕಿ ಒಂದು ಅಂಬುಲೆನ್ಸ್ ಸಂಚಾರವಾಗಿರುತ್ತದೆ. ಬೆಟ್ಟದ ಸಮೀಪ ಒಂದು, ಮಲ್ಲೇನಹಳ್ಳಿ ಪ್ರೌಢಶಾಲೆ ಬಳಿ ಒಂದು, ಮಾಣಿಕ್ಯಧಾರ ಬಳಿ ಅಂಬುಲೆನ್ಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ನಗರದ ಎಂ.ಜಿ ರಸ್ತೆಯಲ್ಲಿ ಒಂದು ಪ್ರತ್ಯೇಕ ತೀವ್ರ ನಿಗಾ ಘಟಕವನ್ನು ಸ್ಥಾಪಿಸಲಾಗಿದ್ದು, ಬೆಟ್ಟ ಹತ್ತುವ ಮಾರ್ಗಮಧ್ಯದಲ್ಲಿ ವೈದ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಕಸ್ಮಿಕ ಅಪಘಾತ ಸಂಭವಿಸಿದರೆ ಬೆಟ್ಟದಲ್ಲಿ ಸ್ಟ್ರಚರ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಬೆಟ್ಟ ಹತ್ತುವ ಮಾರ್ಗದಲ್ಲಿ ಕಾಡುಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಪಾಯಕಾರಿ ಮರಗಿಡಗಳ ರೆಂಬೆಗಳನ್ನು ಕಡಿದು ತೆರವುಗೊಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ವಿದ್ಯುತ್ ಸರಬರಾಜು ಅಡಚಣೆಯಾಗದಂತೆ ಮೆಸ್ಕಾಂ ಇಲಾಖೆಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ತರೀಕೆರೆಯಿಂದ ಅನ್ಯ ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ಬರುವ ಇತರೆ ಎಲ್ಲಾ ವಾಹನಗಳು ಅ.೩೦ ರ ಸಂಜೆ ೪ ಗಂಟೆಯಿಂದ ೩೧ ರ ಮಧ್ಯಾಹ್ನ ೧೨ ಗಂಟೆಯವರೆಗೆ ಕಡ್ಡಾಯವಾಗಿ ಕಡೂರು ಮಾರ್ಗವಾಗಿ ಬರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ತರೀಕೆರೆ-ಲಿಂಗದಳ್ಳಿ-ಸಾಂತವೇರಿ ಮಾರ್ಗವಾಗಿ ಬರುವವರು ತಮ್ಮ ವಾಹನಗಳನ್ನು ಕುಮಾರಗಿರಿಯಲ್ಲಿ ಪಾರ್ಕಿಂಗ್ ಮಾಡುವುದು, ಚಿಕ್ಕಮಗಳೂರು-ಕೈಮರ ಮಾರ್ಗವಾಗಿ ಬಿಂಡಿಗ ಮಲ್ಲೇನಹಳ್ಳಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ವಾಹನಗಳನ್ನು ಮಲ್ಲೇನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಪಾರ್ಕಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ೩೦.ಮತ್ತು ೩೧ ರಂದು ಮಲ್ಲೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಗೇಟ್ನಿಂದ ಕುಮಾರಗಿರಿ ಆರ್ಚ್ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲುಗಡೆ ಮಾಡದಂತೆ ನಿಷೇಧಿಸಲಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರಿನಿಂದ ಬಿಂಡಿಗಾ ದೇವಿರಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳು ಚಿಕ್ಕಮಗಳೂರಿನ ಐ.ಜಿ-ರಸ್ತೆ, ಎಮ್.ಜಿ-ರಸ್ತೆ, ಡಿ.ಎ.ಸಿ.ಜಿ ಪಾಲಿಟೆಕ್ನಿಕ್ ಮೈದಾನದಲ್ಲಿ ವ್ಯವಸ್ಥಿತ ರೀತಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಸಾರ್ವಜನಿಕ ಸಾರಿಗೆಯ ಬಸ್ಸುಗಳಲ್ಲಿ ಬಿಂಡಿಗಾ ಗ್ರಾಮಕ್ಕೆ ಪ್ರಯಾಣಿಸಿ ಸಹಕರಿಸುವಂತೆ ಕೋರಿದ್ದಾರೆ.
ಮುಳ್ಳಯ್ಯನಗಿರಿ, ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ, ಹಾಗೂ ಮಾಣಿಕ್ಯಧಾರಾ ಸ್ಥಳಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಜಾತ್ರೆಯಿಂದ ಉಂಟಾಗುವ ಜನಸಂದಣಿ ಹಿನ್ನಲೆಯಲ್ಲಿ ಅ.೩೦ ರ ಬೆಳಗ್ಗೆ ೧೦ ಗಂಟೆಯಿಂದ ನ.೦೧ ರ ಬೆಳಗ್ಗೆ ೧೦ ಗಂಟೆಯವರೆಗೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಹಾಗೂ ಮಾಣಿಕ್ಯಾಧಾರಾಕ್ಕೆ ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ನಿರ್ಬಂಧಿಸಿದೆ ಎಂದರು.
ಹೋಮ್ಸ್ಟೇ, ರೆಸಾರ್ಟ್ ಮತ್ತು ವಸತಿ ಗೃಹಗಳಲ್ಲಿ ಈಗಾಗಲೇ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ಯಾವುದೇ ನಿಬಂಧ ಇರುವುದಿಲ್ಲ, ಅ.೩೦ ಮತ್ತು ೩೧ ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಬರುವ ಕುರಿತು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಿಂಡಿಗಾ ಮಲ್ಲೇನಹಳ್ಳಿ ದೇವಿರಮ್ಮ ದರ್ಶನಕ್ಕೆ ಬೆಟ್ಟ ಏರುವ ೧೪ ವ?ದೊಳಗಿನ ಮಕ್ಕಳು ಮತ್ತು ೬೦ ವ? ಮೇಲ್ಪಟ್ಟ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಶೈಲೇಂದ್ರ ಉಪಸ್ಥಿತರಿದ್ದರು.
Deviramma Dipotsava- Necessary Precautionary Action by Police Department