ಚಿಕ್ಕಮಗಳೂರು: ಯುವಕರಿಗೆ ದೇಶದ ಕುರಿತು ಸ್ವಚ್ಚತೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದು ಸ್ವಚ್ಚ ಭಾರತ್ ರಾಯಭಾರಿ ವರುಣ್ ಆರ್ಯ ತಿಳಿಸಿದರು.
ಅವರು ಇಂದು ಎಪಿಎಂಸಿಯಲ್ಲಿ ಮೈ ಭಾರತ್, ನೆಹರು ಯುವ ಕೇಂದ್ರ, ಎನ್ಎಸ್ಎಸ್, ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ನಮ್ಮ ಭಾರತ ಸ್ವಚ್ಚ ಭಾರತ ಆಂದೋಲನದ ಅಂಗವಾಗಿ ಸ್ವಚ್ಚತೆಯನ್ನು ಮಾಡಿ ಮಾತನಾಡಿದರು.
ಈಗಾಗಲೇ ಸ್ವಚ್ಚ ಭಾರತ್ ಪೇಜ್ ಒಂದನ್ನು ಮುಕ್ತಾಯಗೊಳಿಸಿದ್ದು, ಎರಡನೇ ಹಂತವನ್ನು ಪ್ರಾರಂಭಿಸಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಲು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಗೂ ಸ್ವಚ್ಚತೆ ಬಗ್ಗೆ ಅರಿವು ಇರಬೇಕು. ಸ್ವಚ್ಚ ಭಾರತವನ್ನು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಭಾರತ ಸ್ವಚ್ಚ ಭಾರತ ಎಂದು ಆಚರಿಸೋಣ ಎಂದು ಹೇಳಿದರು.
ಸಂತ ಜೋಸೆಫರ ಪದವಿ ಕಾಲೇಜಿನಿಂದ ೫೦ ವಿದ್ಯಾರ್ಥಿಗಳು ನಗರಸಭೆ ಪೌರ ಕಾರ್ಮಿಕರು, ವಾರ್ಡಿನ ಸದಸ್ಯ ಗುರುಮಲ್ಲಪ್ಪ, ಎಪಿಎಂಸಿ ಸಿಬ್ಬಂದಿ ಪಾಲ್ಗೊಳ್ಳುವ ಮೂಲಕ ಇವರುಗಳ ಸಹಕಾರದೊಂದಿಗೆ ಈ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.
ನಗರಸಭಾ ಅಧ್ಯಕ್ಷೆ ಸುಜಾತಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಆಸ್ತಿಯಾಗಿದ್ದು, ಅವರಲ್ಲಿ ಸ್ವಚ್ಚ ಭಾರತ್ ಬಗ್ಗೆ ಅರಿವು ಮೂಡಿಸಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸ್ವಚ್ಚತಾ ಕಾರ್ಯಕ್ರಮ ನಗರಸಭೆಗೆ ಪೂರಕವಾಗಿ ಪೂರಕವಾಗಿದ್ದು, ಇದು ಕೇವಲ ಶಾಲಾ-ಕಾಲೇಜುಗಳಿಗೆ ಸೀಮಿತವಾಗದೆ ನಗರದೆಲ್ಲೆಡೆ ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡಾಗ ಮಾತ್ರ ನಾಗರೀಕರಿಗೆ ಸ್ವಚ್ಚತೆ ಬಗ್ಗೆ ತಿಳಿವಳಿಕೆ ಮೂಡಿಸಲು ಅತ್ಯವಶ್ಯಕವಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಗುರುಮಲ್ಲಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ವಿಶ್ವನಾಥ ರೆಡ್ಡಿ, ಎನ್ಎಸ್ಎಸ್ ಅಧಿಕಾರಿ ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಚವರೆ ಸ್ವಾಗತಿಸಿದರು.
Swachh Bharat Movement in APMC