ಚಿಕ್ಕಮಗಳೂರು: ಆಯುರ್ವೇದ ಔಷಧ ಪದ್ಧತಿಯು ಮನುಕುಲದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್ ಎಸ್ ಕೀರ್ತನಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಧನ್ವಂತರಿ ಜಯಂತಿ ದಿನದ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಔಷಧ ಪದ್ಧತಿಯು ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದೆ. ಇದು ನೈಸರ್ಗಿಕ ಪರಿಹಾರಗಳು, ಜೀವನಶೈಲಿಯ ಬದಲಾವಣೆಗಳು ಮತ್ತು ಆರೋಗ್ಯಕರ ಆಹಾರದ ಮೂಲಕ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನಗೊಳಿಸುವ ಕಲ್ಪನೆಯನ್ನು ಆಧರಿಸಿದೆ ಎಂದರು.
ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಬಹುಮುಖ್ಯವಾಗಿದೆ. ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಔಷಧಿ ಪದ್ದತಿಗೆ ಮಾರು ಹೋಗುತ್ತಿರುವುದರಿಂದ ನಮ್ಮ ಆಯುರ್ವೇದ ಔಷಧ ಪದ್ಧತಿಯು ಮರೆಯಾಗುತ್ತಿದ್ದೆ. ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆಗಳನ್ನು ಹೆಚ್ಚು ಬಳಸಬೇಕು ಎಂದ ಅವರು. ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಅವಿಷ್ಕಾರಗಳು, ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಯೊಬ್ಬರು ಆಯುರ್ವೇದ ಪದ್ಧತಿಯನ್ನು ಪ್ರಚಾರಪಡಿಸಿ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಬಿ.ಸಿ. ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆಯುರ್ವೇದ ಚಿಕಿತ್ಸಾ ಪದ್ಧತಿಯು ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಹೆಮ್ಮೆ. ಪ್ರಾಕೃತಿಕವಾಗಿ ಸಿಗುವ ಕೆಲವು ಔಷಧೀಯ ಗಿಡಮೂಲಿಕೆಗಳಿಂದ ಆಯುರ್ವೇದ ಔಷಧಿಯನ್ನು ತಯಾರಿಸಲಾಗುತ್ತದೆ. ಆಯುರ್ವೇದ ಔಷಧ ಪದ್ಧತಿಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ನಮ್ಮ ಸಂಪ್ರಾದಾಯಿಕ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯೂ ನಮ್ಮ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಸಹಕಾರಿಯಾಗಿದ್ದವು. ಪಾಶ್ಚಿಮಾತ್ಯ ಆಹಾರ ಪದ್ಧತಿ ಮತ್ತು ಔಷಧ ಚಿಕಿತ್ಸೆಗೆ ಮಾರು ಹೋಗದೆ ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ. ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ ಎಸ್., ಜಿಲ್ಲಾ ಶಿಕ್ಷಣಾಧಿಕಾರಿ ಲಲಿತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಬ್ರಹ್ಮ ಕುಮಾರೀಸ್ ಬಿ.ಕೆ. ಭಾಗ್ಯಕ್ಕ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
9th National Ayurveda Day