ಚಿಕ್ಕಮಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾಜದ ಉನ್ನತ ಸ್ಥಾನ ತಲುಪಲು ಸಹಕಾರಿಯಾಗಿದೆ. ಪ್ರತಿಯೊಬ್ಬರು ಕಲಿಕೆ ಹಾಗೂ ಸತತ ಪ್ರಯತ್ನಗಳ ಮೂಲಕ ತಮ್ಮ ಗುರಿ ಸಾಧಿಸಬಹುದು ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಇನ್ಸೈಟ್ ಅಕಾಡೆಮಿ ಬೆಂಗಳೂರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಐ.ಟಿ.ಡಿ.ಪಿ ಇಲಾಖೆ ವತಿಯಿಂದ ಇಂದು ನಗರದ ಎ.ಐ.ಟಿ ಕಾಲೇಜು ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜದಲ್ಲಿನ ಗೌರವಯುತವಾದ ಹುದ್ದೆಗೆ ತಲುಪಿ ಸೇವೆ ಸಲ್ಲಿಸಬೇಕೆಂಬ ಗುರಿಯನ್ನು ಹೊಂದಿರುತ್ತಾರೆ. ಬಡತನ ಹಾಗೂ ಉತ್ತಮ ಮಾರ್ಗದರ್ಶಕರ ಕೊರತೆಯಿಂದ ಗುರಿ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ಜೊತೆಗೆ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ ಎಂದರು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಕನಸುಗಳ ಹೊತ್ತು ವಿದ್ಯಾರ್ಥಿ ನಿಲಯಗಳಲ್ಲಿದ್ದು ಶಿಕ್ಷಣ ಪಡೆಯುತ್ತಿರುವ ಅನೇಕ ಬಡ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಉತ್ತಮ ಶ್ರಮ ಹಾಗೂ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಕೊಂಡಲ್ಲಿ ಎಂತಹ ಕಠಿಣ ಕಾರ್ಯದಲ್ಲೂ ಯಶಸ್ಸು ಕಾಣಬಹುದು. ಕನಸುಗಳು ದೊಡ್ಡದಾಗಿರಿಸಿಕೊಂಡು ಅದರತ್ತ ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಿ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೆಗೌಡ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬರು ತಮ್ಮ ಹಿರಿಯರೊಂದಿಗೆ ಮಾಹಿತಿ ಪಡೆದು ಕಲಿಕೆಯಲ್ಲಿ ಮುಂದಾಗಬೇಕು. ಯಾವುದೇ ಉನ್ನತ ಸ್ಥಾನ ತಲುಪುವುದು ಸುಲಭವಲ್ಲ ಸರಿ ದಾರಿಯಲ್ಲಿ ನಡೆದು ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಭೇದಿಸಿ ನಿಂತಲ್ಲಿ ಸಾಧನೆ ಸುಲಭವಾಗಿರುತ್ತದೆ.
ತಮಗೆ ದೊರಕುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಹೊಂದಬೇಕು. ಯಾವುದೇ ಕೆಲಸವನ್ನು ಕಾಯ, ವಾಚ, ಮನಸಾ ನಿರ್ವಹಿಸಿದಲ್ಲಿ ಯಶಸ್ಸು ಕಂಡಿತ ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ವಿಚಾರವಂತರಾಗುವುದರ ಜೊತೆಗೆ ಸಂಸ್ಕಾರಯುತರಾಗಿ ಸಾರ್ವಜನಿಕ ಸೇವೆಯಲ್ಲಿ ಮುಂದಾಗಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಪ್ರಾಸ್ತಾವಿಕವಾಗಿ ಮಾತನಾಡಿ. ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಗುರಿ ಹಾಗೂ ಅವುಗಳನ್ನು ತಲುಪುವ ದಾರಿಯ ಕುರಿತು ಮಾಹಿತಿಯ ಕೊರತೆಯಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನದ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ತರಬೇತಿ ಸಂಸ್ಥೆಯ ಮೂಲಕ ಗುಣಮಟ್ಟದ ತರಬೇತಿ ನೀಡಿ ಅವರನ್ನು ಸಾಧನೆಯೆಡೆಗೆ ತಲುಪಲು ಸಹಕರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾರ್ಯಗಾರದ ಸದುಪಯೋಗ ಪಡೆದುಕೊಂಡು ಇಲ್ಲಿ ತಿಳಿಸುವಂತಹ ಮಾಹಿತಿಯನ್ನು ತಮ್ಮ ಸಹಪಾಠಿಗಳಿಗೂ ತಿಳಿಸಿ ಸಮಾಜದ ಉತ್ತಮ ಪ್ರಜೆಗಳಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾರಾಯನರಡ್ಡಿ ಕನಕರಡ್ಡಿ ಹಾಗೂ ಹಾಸನ ಜಿಲ್ಲೆಯ ಡಿಸಿಎಫ್ ಸೌರಬ್ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಐಟಿ ಕಾಲೇಜು ಪ್ರಾಂಶುಪಾಲ ಜಯ್ದೇವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್, ಐಟಿಡಿಪಿ ಅಧಿಕಾರಿ ಭಾಗೀರಥಿ, ಹಿಂದುಳಿದ ವರ್ಗಗಳ ತಾಲ್ಲೂಕು ಅಧಿಕಾರಿ ಬಡಿಗೇರ್, ಇನ್ಸೈಟ್ ಅಕಾಡೆಮಿ ಸಂಸ್ಥಾಪಕ ವಿನಯ್ ಕುಮಾರ್, ಹಾಗೂ ಉಪನ್ಯಾಸಕ ಶಮಂತ್ಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು
Conductor of Competitive Examinations for Students