ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯವನ್ನು ಕೈಗೊಂಡು ಅಕ್ಟೋಬರ್ ೨೯ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಾಂತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಭಾರತ ಚುನಾವಣಾ ಆಯೋಗವು ಪ್ರತಿ ವರ್ಷ ಜನವರಿ ೦೧ ನ್ನು ಅರ್ಹತಾ ದಿನಾಂಕವಾಗಿ ನಿಗಧಿಪಡಿಸಿಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಕಾರ್ಯವನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.
ಅಕ್ಟೋಬರ್ ೨೯ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನವೆಂಬರ್ ೨೮ ರವರೆಗೆ ಸರಿಪಡಿಸಿಕೊಳ್ಳಲು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನವೆಂಬರ್ ೦೯, ೧೦, ೨೩ ಮತ್ತು ೨೪ ರಂದು ಮನವಿ, ಆಕ್ಷೇಪಣೆಗಳ ಸರಿಪಡಿಸುವ ಕಾರ್ಯ ನಡೆಯಲಿದ್ದು, ೨೦೨೫ ಜನವರಿ ೦೬ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
೨೦೨೪ರ ಅಕ್ಟೋಬರ್ ೨೯ ರಂದು ಪ್ರಕಟಣೆ ಮಾಡಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೯,೭೩,೯೧೩ ಮತದಾರರಿದ್ದಾರೆ. ಪುರುಷರು ೪,೭೭,೯೪೧, ಮಹಿಳಾ ಮತದಾರರು ಇದರಲ್ಲಿ ೪,೯೫,೯೪೩ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ೨೯ ಮತದಾರರಿದ್ದು, ೮೮೧೨ ಯುವ ಮತದಾರರು ಇದ್ದಾರೆ ಎಂದರು.
೧೨೩-ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೬೮,೬೫೩, ೧೨೪-ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ೧,೭೧,೨೨೮, ೧೨೫-ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ೨,೩೧,೨೫೪, ೧೨೬-ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೧,೯೪,೦೫೫, ೧೨೭-ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ೨,೦೮,೭೧೩ ಮತದಾರರಿದ್ದಾರೆ ಎಂದು ತಿಳಿಸಿದ ಅವರು ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಸಹಕಾರ ಮುಖ್ಯ ಎಂದು ಹೇಳಿದರು.
೨೦೨೪ರ ಏಪ್ರಿಲ್ ೦೪ ರಿಂದ ಅಕ್ಟೋಬರ್ ೨೬ ರ ವರೆಗೆ ನಡೆದ ನಿರಂತರ ಪರಿಷ್ಕರಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ೮,೦೪೩ ಮತದಾರರು ಸೇರ್ಪಡೆಯಾಗಿದ್ದಾರೆ. ೮,೩೧೧ ಮತದಾರರನ್ನು ಕೈಬಿಡಲಾಗಿದ್ದು, ಮತದಾರರ ಪಟ್ಟಿಯಲ್ಲಿ ೧೫,೧೪೧ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ೧೨೨೯ ಮತಗಟ್ಟೆಗಳಿದ್ದು, ಹಾಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದ ಅಜ್ಜಂಪುರ ತಾಲ್ಲೂಕಿನಲ್ಲಿ ೦೧ ಮತಗಟ್ಟೆಯನ್ನು ಹೊಸದಾಗಿ ರಚಿಸಲಾಗಿದೆ ಅದರಂತೆ ಜಿಲ್ಲೆಯಲ್ಲಿ ೧೨೩೦ ಮತಗಟ್ಟೆಗಳಿವೆ ಎಂದು ತಿಳಿಸಿದರು.
ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದು, ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ಆಕ್ಷೇಪಣೆ ಅರ್ಜಿಯನ್ನು ವೇಳಾಪಟ್ಟಿ ದಿನಾಂಕದಲ್ಲಿ ಪಡೆದುಕೊಳ್ಳಲಾಗುತ್ತದೆ. ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ೦೧ ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದ ಅವರು ನಾಗರಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.
Meeting between various political parties regarding special brief revision of voter list