ಚಿಕ್ಕಮಗಳೂರು: ಯಾವುದೇ ವ್ಯಕ್ತಿ ಸಾರ್ವಜನಿಕ ಬದುಕಿನಲ್ಲಿ ಸಂತೃಪ್ತಿ, ಸಂಸ್ಕಾರ, ಸಾಧನೆ ಮಾಡಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಶುಭ ಹಾರೈಕೆಗಳು, ಆಶೀರ್ವಾದಗಳು ಲಭಿಸುತ್ತವೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಪ್ರವಾಸಿ ಮಂದಿರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿರುವ ಗವಿರಂಗಪ್ಪ ಬಿ.ಹೆಚ್ (ಬಾಣೂರು) ಇವರ ಬೀಳ್ಕೋಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ನೌಕರರು ವರ್ಗಾವಣೆ, ನಿವೃತ್ತಿ ಆದಾಗ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಸಹೋದ್ಯೋಗಿಗಳು ಶುಭ ಹಾರೈಸಿದರೆ ಅವರು ಕರ್ತವ್ಯದಲ್ಲಿ ಹಾಗೂ ಜೀವನದಲ್ಲಿ ಸಂತೃಪ್ತಿ ಸಾಧನೆ ಮಾಡಿದ್ದಾರೆ ಎಂದು ಅರ್ಥ ಎಂದರು.
ಸರ್ಕಾರ ಬದಲಾವಣೆ ಆದಾಗ ಲೋಕೋಪಯೋಗಿ ಇಲಾಖೆಯಲ್ಲಿ ಎಇಇ, ಎಕ್ಸಿಕ್ಯೂಟೀವ್ ಇಂಜಿನಿಯರ್ ಉಳಿಯುವ ಸಾಧ್ಯತೆ ಇರುವುದಿಲ್ಲ, ಸರ್ಕಾರ ಬಂದು ೧೮ ತಿಂಗಳಾದರು ಎಇಇ ಗವಿರಂಗಪ್ಪ. ಎಕ್ಸಿಕ್ಯೂಟೀವ್ ಇಂಜಿನಿಯರಿಂಗ್ ಶ್ರೀಧರ್ ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎಂಬುವುದಕ್ಕೆ ಎಲ್ಲಾ ಪಕ್ಷದವರ ಮತ್ತು ರಾಜಕೀಯ ಮುಖಂಡರ ಜೊತೆಗೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂಬುವುದಕ್ಕೆ ಇದು ನಿದರ್ಶನ ಎಂದು ಹೇಳಿದರು.
ಗವಿರಂಗಪ್ಪ ನವರಿಗೆ ಇದು ನಿವೃತ್ತಿಯಲ್ಲ ಎಲ್.ಎಲ್.ಬಿ ಆಗಿರುವುದರಿಂದ ಪ್ರವೃತ್ತಿಯಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ನಮ್ಮೊಂದಿಗೆ ಇರುತ್ತಾರೆ, ನಿವೃತ್ತರು ಮತ್ತು ಅವರ ಕುಟುಂಬದವರಿಗೆ ಒಳ್ಳೆಯದಾಗಲಿ ಆರೋಗ್ಯ, ಐಶ್ವರ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಮಾತನಾಡಿ ಸಮಾಜದಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿ ಸೇವೆಯಲ್ಲಿ ಶಿಸ್ತನ್ನು ಪಾಲಿಸುತ್ತಿದ್ದರು ಎಂಬುವುದಕ್ಕೆ ಗವಿರಂಗಪ್ಪ ರವರ ಅಪಾರ ಸಂಖ್ಯೆಯಲ್ಲಿ ಬಂದಿರುವ ಅಭಿಮಾನಿ ಬಳಗ ಸಂಬಂದಿಕರು, ಸ್ನೇಹಿತರು ಕಾರಣ ಎಂದು ಹೇಳಿದರು.
ಹೃದಯ-ಹೃದಯಗಳ ವಾತ್ಸಲ್ಯಕ್ಕೆ ಕೊಂಡಿ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಅವರು ಒಬ್ಬರನೊಬ್ಬರು ಅರಿತಾಗ ಮಾತ್ರ ಹೃದಯ ಮಿಡಿತ, ಅಂತರಾಳದ ಪ್ರೀತಿ, ವಾತ್ಸಲ್ಯ, ಬಾಂಧವ್ಯ ಏಕಾಏಕಿ ಬರುವಂತದಲ್ಲ ಸುದೀರ್ಘವಾಗಿ ೩೪ ವರ್ಷಗಳು ಸರ್ಕಾರಿ ಸೇವೆಯಲ್ಲಿ ನಡೆದುಬಂದ ಅನೇಕ ಕಲ್ಲು ಮುಳ್ಳಿನ ಹಾದಿ ಉತ್ತಮವಾದ ದಾರಿ ಇವುಗಳನ್ನು ಸವೆಸುವಾಗ ಯಾವ ರೀತಿ ಬಾಂಧವ್ಯಗಳನ್ನು ಸಮಾಜದಲ್ಲಿ ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಲ್ಲಿ ಹೊಂದಿದ್ದರು ಎಂಬುವುದು ಮುಖ್ಯವಾಗುತ್ತದೆ ಎಂದರು.
ಇಲಾಖೆಯ ಮೇಲಾಧಿಕಾರಿಗಳು ಇಂದು ಗವಿರಂಗಪ್ಪ ರವರನ್ನು ಅಭಿನಂಧಿಸುತ್ತಿರುವುದನ್ನು ನೋಡಿದರೆ ಔದಾರ್ಯ, ಪ್ರೀತಿ ಸಾಕ್ಷಿಯಾಗುತ್ತದೆ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಾಮಾನ್ಯವಾದರು ಈ ರೀತಿಯ ಅಭಿಮಾನ ಎಷ್ಟು ಜನರಿಗೆ ಲಭ್ಯವಾಗಿದೆ ಎಂಬುದು ಉತ್ತಮವಾದ ಸಂಸ್ಕಾರ, ಬಾಂಧವ್ಯವನ್ನು ಅವರ ಪೋಷಕರು ಕೊಟ್ಟ ಫಲವಾಗಿ ಇಂದು ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಕಳೆದ ೩೪ ವರ್ಷಗಳ ಸರ್ಕಾರಿ ಸೇವೆಯಲ್ಲಿ ಯಾವುದೇ ಲೋಪ, ಆರೋಪ ಇಲ್ಲದಂತೆ ಕರ್ತವ್ಯ ನಿರ್ವಹಿಸಿರುವ ಗವಿರಂಗಪ್ಪ ರವರು ಸಹೋದ್ಯೋಗಿಗಳ ಜೋತೆ ಅನ್ಯೋನ್ಯವಾಗಿ ಸೌಹಾರ್ಧತೆಯಿಂದ ಸೇವೆ ಸಲ್ಲಿಸಿದ್ದರು ಎಂಬುವುದಕ್ಕೆ ಈ ಕಾರ್ಯಕ್ರಮ ನಿದರ್ಶನ ಎಂದರು.
ಗವಿರಂಗಪ್ಪ ರವರಿಗೆ ನಿವೃತ್ತಿ ಜೀವನ, ಆರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸುವ ಜೊತೆಗೆ ಕುಟುಂಬದವರೊಂದಿಗೆ ಜೀವನ ನೆಡೆಸಲಿ ಎಂದು ಹಾರೈಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ನಿವತ್ತಿ ಹೊಂದಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗವಿರಂಗಪ್ಪ ರವರು ಸರ್ಕಾರಿ ಸೇವೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ ಎಂದು ಹೇಳಿದರು.
ನನ್ನ ಈ ಸೇವೆಗೆ ಮೇಲಾಧಿಕಾರಿಗಳ ಕಠಿಣವಾದ ಮಾರ್ಗದರ್ಶನ, ಜನ ಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದು ಕೆಲಸ ಮಾಡಲು ಸೂಚಿಸಿದಾಗ ಸಮರ್ಪಕವಾಗಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿರುವ ತೃಪ್ತಿ ಇದೆ ನೂತನ ಜಿಲ್ಲಾಧಿಕಾರಿಗಳ ಸಂಕೀರ್ಣ, ಸ್ಟೇಡಿಯಂ, ರಸ್ತೆಗಳ ಅಭಿವೃದ್ಧಿ ಮುಂತಾದವುಗಳನ್ನು ಗುಣಮಟ್ಟದ ಕಾಮಗಾರಿ ನಡೆಸಿ ಇಲಾಖೆಗೆ ಒಳ್ಳೆಯ ಹೆಸರು ತಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಮುರಡಪ್ಪ, ಪಿಡಬ್ಲೂಡಿ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್, ಹಿರಿಯ ಅಧಿಕಾರಿಗಳಾದ ಬಸವರಾಜಪ್ಪ, ಪುಟ್ಟೇಗೌಡ, ಶಿಕ್ಷಕ ಮಲ್ಲೇಶಪ್ಪ, ಶಿವಪ್ರಸಾದ್, ರವಿಕುಮಾರ್ ಮತ್ತಿತರರು ಸೇರಿದಂತೆ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.
Assistant Executive Engineer Gavirangappa B.H (Banur) to Bairdkodi