ಚಿಕ್ಕಮಗಳೂರು: ಭಾರತದ ಧೀಮಂತ ನಾಯಕಿ ಉಕ್ಕಿನ ಮಹಿಳೆ ಎಂದೆ ಕರೆಸಿಕೊಂಡಿದ್ದ ೧೫ ವರ್ಷಗಳ ಕಾಲ ಪ್ರಧಾನಮಂತ್ರಿಗಳಾಗಿದ್ದ ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಭಾರತದ ಉಪ ಪ್ರಧಾನಿಯಾಗಿ ದೇಶದ ೫೫೩ ಸಂಸ್ಥಾನಗಳನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಎಂದೇ ಭಾಜನರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಇಂದು ಆಚರಿಸಲಾಯಿತು.
ಕೃಷಿ ಉತ್ಪನ್ನಗಳ ರಪ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್ ಮಾತನಾಡಿ, ಪ್ರಿಯದರ್ಶಿನಿ ಇಂದಿರಾಗಾಂಧಿ ಅವರು ಭಾರತಕ್ಕಷ್ಟೇ ಅಲ್ಲದೆ ವಿಶ್ವದ ನಾಯಕಿಯಾಗಿದ್ದರು. ೧೫ ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ ಸುಭದ್ರ ದೇಶವನ್ನು ಕಟ್ಟುವಲ್ಲಿ ಮತ್ತು ಶತೃಗಳ ಹೆಡೆಮುರಿ ಕಟ್ಟಿ ಸದೆ ಬಡಿದ ಈ ನಾಯಕಿಯನ್ನು ಅಂದಿನ ವಿರೋಧ ಪಕ್ಷದ ಮುಖಂಡರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗಿ ಎಂದು ಕರೆದಿದ್ದರು ಎಂಬುದನ್ನು ನೆನೆಪಿಸಿಕೊಂಡರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರೂ ಆದ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಇಂದಿರಾಗಾಂಧಿ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದರಲ್ಲದೇ, ಈ ರಾಷ್ಟ್ರವನ್ನು ನೂರಾರು ಸಂಸ್ಥಾನಗಳಿಂದ ಒಗ್ಗೂಡಿಸುವಲ್ಲಿ ಕಾರಣಕರ್ತರಾದ ಮಾಜಿ ಉಪ ಪ್ರಧಾನಿ ಹಾಗೂ ಉಕ್ಕಿನ ಮನುಷ್ಯ ಎಂದೇ ಕರೆಸಿಕೊಂಡಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಇಂದು ನಾವೆಲ್ಲ ಭಾರತ ಸದಾ ಏಕೀಕರಣ ಶಕ್ತಿಯಾಗಿ ಹೊರಹೊಮ್ಮಲು ಮನಸ್ಸು ಮಾಡಬೇಕು ಇದು ಅವರಿಗೆ ಕೊಡುವ ಕೊಡುಗೆ ಎಂದರು.
ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್ ನಾಯ್ಡು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಎಸ್.ಸಿ ವಿಭಾಗದ ಜಿಲ್ಲಾಧ್ಯಕ್ಷ ಎಂ.ಮಲ್ಲೇಶ್ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಮದ್ ಹನೀಪ್, ಸಿಡಿಎ ಸದಸ್ಯರಾದ ಶೃದೀಪ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಮಚಂದ್ರ, ಎಸ್.ಸಿ ವಿಭಾಗದ ರಾಜ್ಯ ಸಂಚಾಲಕಿ ನೇತ್ರಾವತಿ, ಮುಖಂಡರಾದ ರಘು, ಬೀಕನಹಳ್ಳಿ ಧರ್ಮೇಶ್, ನಾಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Commemoration of Indira Gandhi at Congress office