ಚಿಕ್ಕಮಗಳೂರು: ಕನ್ನಡ ಎಂದರೆ ಬರಿ ನುಡಿ ಅಲ್ಲ, ಅದು ಜೀವ, ಭಾವ, ಉಸಿರು ಮತ್ತು ನಮ್ಮ ಹೆಮ್ಮೆ. ಮಹಾಕವಿ ಕುವೆಂಪು ಅವರು ಹೇಳಿದಂತೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಭಾವನೆ ಕನ್ನಡಿಗರ ಎದೆಯಲ್ಲಿ ಸದಾ ಹಸಿರಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕರೆ ನೀಡಿದರು.
ಅವರು ಶುಕ್ರವಾರ ನಗರದ ಸುಭಾಶ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ೬೯ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ ಕರುನಾಡು ಎಂಬ ಪದ ಎತ್ತರದ ಭೂಭಾಗ ಎನ್ನುವ ಅರ್ಥವನ್ನು ನೀಡುತ್ತದೆ. ಕರ್ನಾಟಕದ ಜನತೆ ನಿಜಕ್ಕೂ ಎಲ್ಲಾ ಅರ್ಥದಲ್ಲೂ ಎತ್ತರದ, ಗೌರವದ ಸ್ಥಾನಮಾನಗಳಿಗೆ ಸದಾ ಅರ್ಹರಾಗಿದ್ದಾರೆ.
ಮಹಾಕಾವ್ಯಗಳ ರಚನೆಗೆ ಸಂಸ್ಕೃತವನ್ನು ಬಿಟ್ಟು ಕನ್ನಡವನ್ನು ಆಯ್ದುಕೊಂಡ ಕನ್ನಡದ ಧೀಮಂತ ಕವಿಗಳಾದ ಪಂಪ, ಪೊನ್ನ, ರನ್ನರಂತಹ ಮಹಾಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕೆ ಹೊಸ ಕಾಯಕಲ್ಪ ನೀಡಲು ಶ್ರಮಿಸಿದ ಹಾಗೂ ದೇಶದಲ್ಲೇ ಕನ್ನಡಕ್ಕೇ ಹೆಚ್ಚು ಜ್ಞಾನಪೀಠ ತಂದುಕೊಟ್ಟ ಸಾಹಿತಿಗಳು ಕನ್ನಡಿಗರನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದರು.
ರೆವರೆಂಡ್ ಫರ್ಡಿನಾಂಡ್ ಕಿಟಲ್ ಅವರು ಕನ್ನಡ ಭಾಷೆಯ ಅಧ್ಯಯನವನ್ನು ಕೈಗೊಂಡು, ೧೮೯೪ರಲ್ಲೇ ಸುಮಾರು ೭೦,೦೦೦ ಪದಗಳ ಕನ್ನಡ-ಇಂಗ್ಲೀಷ್ ನಿಘಂಟನ್ನು ತಯಾರಿಸಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಕನ್ನಡದ ನಿತ್ಯೋತ್ಸವ ಕವಿಯೆಂದೇ ಪ್ರಸಿದ್ಧಿ ಪಡೆದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಬರೆದ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಎಂಬ ನಿತ್ಯೋತ್ಸವದ ಪದ್ಯವು ಎಂದೆಂದಿಗೂ ಜನಪ್ರಿಯವಾದುದು ಎಂದರು.
ಕರ್ನಾಟಕದ ಕುಲ ಪುರೋಹಿತರಾದ ಆಲೂರು ವೆಂಕಟರಾಯರ ಜೊತೆಗೂಡಿ ಅಸಂಖ್ಯಾತ ಕನ್ನಡಿಗರು, ಕನ್ನಡಾಭಿಮಾನಿಗಳು ಮಾಡಿದ ಹೋರಾಟದ ಫಲ ಇಂದು ನಾವು ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲು ಕಾರಣವಾಗಿದೆ ಎರಡೂವರೆ ಸಾವಿರ ವರ್ಷಗಳ ಇತಿಹಾಸದ ಹೆಗ್ಗಳಿಕೆಯನ್ನು ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂದು ಗೌರವ ಸಿಕ್ಕಿರುವುದು ನಮ್ಮ ಹೆಮ್ಮೆ. ಆದರೆ, ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೇ ಅದರ ಸೊಬಗು ಸೌಂದರ್ಯ, ಆದರ ಅಭಿಮಾನ ಹೆಚ್ಚಾಗುವುದು ಮತ್ತು ಈ ಭಾಷೆಯನ್ನು ಸಮೃದ್ಧವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಚಿಕ್ಕಮಗಳೂರಿನ ಸಂಸ್ಕೃತಿ, ಪರಂಪರೆ, ಇತಿಹಾಸಗಳಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಪುರಾಣ ಪುಣ್ಯ ಕಥೆಗಳು ಸೇರಿಕೊಂಡಿವೆ. ಹೊಯ್ಸಳ ಚಕ್ರವರ್ತಿಯ ಆಸ್ಥಾನ ಕವಿಯಾಗಿದ್ದ ರುದ್ರಭಟ್ಟ ಮತ್ತು ಜನಸಾಮಾನ್ಯರ ಹೃದಯ ಕವಿ ಎಂದು ಕರೆಯಲ್ಪಟ್ಟ ಲಕ್ಷ್ಮೀಶ ಕವಿ ಇಬ್ಬರೂ ನಮ್ಮ ದೇವನೂರಿನವರು ಎಂಬುದು ಹೆಗ್ಗಳಿಕೆ ಎಂದರು.
ಶರಣ ಸಂಘರ್ಷದಲ್ಲಿ ಕಲ್ಯಾಣದಿಂದ ಚದುರಿಹೋದ ಶರಣರಲ್ಲಿ ಶರಣಮಾತೆ ಅಕ್ಕ ನಾಗಮ್ಮ ಮತ್ತು ಶರಣ ನುಲಿಯ ಚಂದಯ್ಯ ತಮ್ಮ ಕೊನೆಯ ದಿನಗಳನ್ನು ಕಳೆದದ್ದು ನಮ್ಮ ತರೀಕೆರೆಯ ಪರಿಸರದಲ್ಲಿ. ಅಮೃತಾಪುರದಲ್ಲಿ ಕವಿ ಚಕ್ರವರ್ತಿ ಜನ್ಮ ಬರೆದ ಶಾಸನ ವೈಭವಪೂರ್ಣವಾಗಿ ನಿಂತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ-೧೭೩ರಲ್ಲಿ ಬೇಲೂರು ಉಪ ವಿಭಾಗ ವತಿಯಿಂದ ಒಟ್ಟು ೨೬.೩೨ ಕಿ.ಮೀ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಂದಾಜು ಮೊತ್ತ ರೂ.೪೦೦.೬೯ ಕೋಟಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೂಡಿಗೆರೆ ಹ್ಯಾಂಡ್ ಪೋಸ್ಟ್ನಿಂದ ಮೂಗ್ತಿಹಳ್ಳಿಯವರೆಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಅದಕ್ಕೆ ಪೂರಕವಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.
ಇದಕ್ಕೂ ಮುನ್ನ ಭುವನೇಶ್ವರಿ ಭಾವಚಿತ್ರದೊಂದಿಗೆ ವಿವಿಧ ಸ್ಥಬ್ದ ಚಿತ್ರಗಳ ಮೆರವಣಿಗೆ ತಾಲೂಕು ಕಚೇರಿಯಿಂದ ಆರಂಭಗೊಂಡು ಎಂ.ಜಿ ರಸ್ತೆ ಮೂಲಕ ಸಾಗಿ, ನೇತಾಜಿ ಸುಭಾ?ಚಂದ್ರಬೋಸ್ ಜಿಲ್ಲಾ ಆಟದ ಮೈದಾನ ತಲುಪಿತು. ಪೊಲೀಸ್ ಇಲಾಖೆ ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಿವಿಧ ತುಕಡಿಗಳಿಂದ ಆಕ?ಕ ಪಥಸಂಚಲನ ನಡೆಯಿತು. ಸ್ಥಬ್ದಚಿತ್ರ ಮೆರವಣಿಗೆ ನೋಡುಗರ ಮನಸೂರೆಗೊಂಡವು.
ಶಾಸಕ ಎಚ್.ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಭದ್ರಾ ಕಾಡ ಅಧ್ಯಕ್ಷ ಡಾ.ಅಂಶುಮಂತ್ ಅಪರ ಜಿಲ್ಲಾಧಿಕಾರಿ ಕನಕರಡ್ಡಿ ನಾರಾಯಣರಡ್ಡಿ, ಜಿ.ಪಂ ಸಿ.ಇ.ಓ. ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಇತರರು ಉಪಸ್ಥಿತರಿದ್ದರು.
Kannada is not just a language – it is life