ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಗುರುದತ್ತಾತ್ರೇಯ ಬಾಬಾಬುಡನ್ ಗಿರಿ ಭಾಗದ ತಾಣಗಳಲ್ಲಿ ಪ್ರವಾಸಿಗರು ಮತ್ತು ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಅವರು ಶುಕ್ರವಾರ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆಯೂ ಹೆಚ್ಚಾಗಿದೆ. ಈಗಾಗಲೇ ತಜ್ಞರು ಇಲ್ಲಿಗೆ ಭೇಟಿ ಮಾಡಿ ಹೆಚ್ಚು ವಾಹನ ಸಂಚಾರದಿಂದ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರು,
ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳೀಯರು, ಇನ್ನಿತರರ ಅಭಿಪ್ರಾಯ ಕೇಳಿ ನಂತರ ಯಾವ ರೀತಿ ವ್ಯವಸ್ಥೆ ಮಾಡಬಹುದು ಎಂಬುದನ್ನು ತೀರ್ಮಾನಿಸಲು ಸ್ಥಳೀ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.
ಈ ಭಾಗದಲ್ಲಿ ದಿನವೊಂದಕ್ಕೆ ೬೦೦ ವಾಹನಗಳಿಗೆ ಮಾತ್ರ ಅವಕಾಶ ನೀಡಬಹುದು ಈ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ಇಲ್ಲಿ ಬೇಸ್ ಕ್ಯಾಂಪ್ ನಿರ್ಮಿಸಿ ಅಲ್ಲಿಂದ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದ ಖಾಸಗಿ ವಾಹನಗಳಲ್ಲಿ ಗಿರಿ ಭಾಗದ ಪ್ರವಾಸಿ ತಾಣಗಳಿಗೆ ತೆರಳಲು ಅವಕಾಶ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಪ್ರವಾಸಿಗರು ತಮ್ಮದೇ ವಾಹನದಲ್ಲಿ ಗಿರಿ ಭಾಗಕ್ಕೆ ತೆರಳಲು ಬಯಸಿದರೆ ಹೆಚ್ಚು ಶುಲ್ಕ ವಿಧಿಸಲು ಯೋಚಿಸಲಾಗುತ್ತಿದೆ ಎಂದರು.
ಈ ಸಂಬಂಧ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ. ಸಿಇಓ ಇತರರು ಸಮಾಲೋಚನೆ ನಡೆಸುತ್ತಿದ್ದಾರೆ ಎಂದರು.
ಮುಳ್ಳಯ್ಯನಗಿರಿ ಪ್ರದೇಶ ಅಪಾಯಕಾರಿ ವಲಯ ಎಂದು ತಜ್ಞರು ವರದಿ ನೀಡಿಲ್ಲ. ಆದರೆ ಹೆಚ್ಚು ವಾಹನ ದಟ್ಟಣೆ ಉಂಟಾದರೆ ಅದುರುವಿಕೆ ಉಂಟಾಗುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಮುಂಜಾಗ್ರತೆ ವಹಿಸುತ್ತಿದ್ದೇವೆ ಎಂದರು.
ಇಲ್ಲಿ ಮೊಬೈಲ್ ಶೌಚಾಲಯಗಳನ್ನು ನಿರ್ಮಿಸಲು ಅವಕಾಶವಿದೆ. ಪಿಪಿಪಿ ಮಾದರಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿದೆ. ಇದರೊಂದಿಗೆ ಕುಡಿಯುವ ನೀರು ಮತ್ತಿತರೆ ಪ್ರವಾಸಿ ಸೌಲಭ್ಯಗಳ್ನನು ಕಲ್ಪಿಸಬೇಕಿದೆ. ಇದೆಲ್ಲವನ್ನೂ ಪರಿಶೀಲಿಸಲು ಇಲ್ಲಿಗೆ ಭೇಟಿ ನೀಡಿದ್ದೇವೆ. ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳುತ್ತಿದ್ದೇವೆ ಎಂದು ತಿಳಿಸಿದರು.
ಅತೀವೃಷ್ಠಿಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ಥಿಗೆ ೧೭ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು, ಸಿಇಓ ಅವರಿಂದ ಮತ್ತೆ ಪ್ರಸ್ತಾವನೆ ಕೇಳಿದ್ದೇವೆ. ನಂತರ ಅನುದಾನ ತರುತ್ತೇವೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಭದ್ರಾ ಕಾಡ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ, ಎಸ್ಪಿ ಡಾ. ವಿಕ್ರಮ ಅಮಟೆ ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮುಖಂಡರು ಇದ್ದರು.
District In-charge Minister K.J.George visited the sites of Bababudan Giri area