ಚಿಕ್ಕಮಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಕೃಷಿ ಭೂಮಿ, ದೇವಾಲಯ ಸೇರಿದಂತೆ ಶತ ಶತಮಾನಗಳಿಂದ ಸಾಗು ಮಾಡಿಕೊಂಡು ಬದುಕು ಕಟ್ಟಿಕೊಮಡಿರುವ ಜಮೀನು ಈಗ ವಕ್ಫ್ ಆಸ್ತಿ ಎಂದು ದಾಖಲಾಗಿರುವುದನ್ನು ರದ್ದುಪಡಿಸುವಂತೆ ಮತ್ತು ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ವಕ್ಫ್ಗೂ ಪೂರ್ವದಿಂದಲೇ ಜನರು ದಾಖಲೆಗಳೊಂದಿಗೆ ಸಾಗು ಮಾಡಿಕೊಂಡು ಬಂದಿದ್ದಾರೆ. ಈಗ ದಿಢೀರನೆ ಜಮೀನು ವಕ್ಫ್ ಆಸ್ತಿ ಎಂದು ದಾಖಲೆ ಸೃಷ್ಟಿಸುವ ಮೂಲಕ ಬಡ ಕೃಷಿಕರು, ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ಎಲ್ಲಾ ವರ್ಗದ ಜನರು ಭೀತಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈತರ ಭೂಮಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಾಗಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕಕ್ಕೆ ಒಳಗಾಗಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಕಾರಣಕರ್ತರಾಗಿದ್ಧಾರೆ. ಇದೊಂದು ಲ್ಯಾಂಡ್ ಜಿಹಾದ್ ರೂಪದಂತಿದೆ. ರೈತರು ತಮ್ಮ ಜಮೀನಿನ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ರಾಜ್ಯದಲ್ಲಿ ಆದಿಲ್ ಶಾಹಿ, ತುಘಲಕ್ ಮಾದರಿಯ ಆಡಳಿತ ನಡೆಯುತ್ತಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ವಿಜಯಪುರ ಜಿಲ್ಲೆಯ ಮಾದರಿಯಲ್ಲೇ ನಮ್ಮ ಜಿಲ್ಲೆಯಲ್ಲೂ ಸಹಸ್ರಾರು ಎಕರೆ ಜಮೀನಿನ ಪಹಣಿಯಲ್ಲೂ ವಕ್ಫ್ ಎಂದು ನಮೂದಾಗಿದ್ದು, ರೈತರು, ಮಠಾಧೀಶರು, ದೇವಾಲಯ ಸಮಿತಿಯವರು ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ಸಿಎಂ ಸೂಚನೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ಸಚಿವ ಜಮೀರ್ ಅಹಮದ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲ ಆತಂಕ ಸೃಷ್ಟಿಗೆ ರಾಜ್ಯ ಕಾಂಗ್ರೆಸ್ ಸರಕಾರ ಕಾರಣವಾಗಿದೆ ಎಂದು ಆರೋಪಿಸಿರುವ ಅವರು, ವಕ್ಫ್ ಸೃಷ್ಟಿಸಿರುವ ಆತಂಕ ಪರಿಹರಿಸಲು ತ್ವರಿತ ಕ್ರಮ ಜರುಗಿಸಲು ಜಿಲ್ಲಾ ಬಿಜೆಪಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಎಲ್ಲಾ ಸಮಸ್ಯೆಗಳಿಗೆ ದೇಶದಲ್ಲಿ ಏಕ ನಾಗರಿಕ ಕಾಯಿದೆ ಜಾರಿಯ ತುರ್ತು ಅಗತ್ಯವಿದೆ ಎಂದಿರುವ ಅವರು, ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟೀಕರಣದ ಮೂಲಕ ಸಂವಿಧಾನ ಬಾಯಿರ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಈ ಕ್ರಮವನ್ನು ಖಂಡಿಸಿ ಜನರಿಗೆ ನ್ಯಾಯ ದೊರಕಿಸಲು ಜಿಲ್ಲೆಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನ.೪ ರಂದು ಬೆಳಗ್ಗೆ ೧೦-೦ ಗಂಟೆಗೆ ಚಿಕ್ಕಮಗಳೂರು ತಾಲೂಕು ಕಚೇರಿ ಆವರಣದಿಂದ ನಗರ ಬಿಜೆಪಿ ಮಂಡಲ ವತಿಯಿಂದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಹನುಮಂತಪ್ಪ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಆನಂತರ ಜಿಲ್ಲಾಧಿಕಾರಿಗೆ ಮನವಿ ಸಲಾಗುತ್ತದೆ ಎಂದು ತಿಳಿಸಿದ್ದಾರೆ.
BJP protests demanding the cancellation of the document that the land belongs to Waqf