ಚಿಕ್ಕಮಗಳೂರು: ಭಾರತೀಯ ಪರಂಪರೆಯಲ್ಲಿ ಉಪನಿಷತ್ ಕಾಲದಲ್ಲಿಯೇ ಪ್ರಕೃತಿ ಆರಾಧನೆಗೆ ಒತ್ತು ಕೊಡಲಾಗಿದೆ. ದ್ವಾಪರ ಯುಗದಲ್ಲಿ ಕೃಷ್ಣನೂ ಸಹ ಗೋವರ್ಧನ ಗಿರಿಯನ್ನು ಪೂಜಿಸಲು ಕರೆ ಕೊಟ್ಟಿರುವುದನ್ನು ಗಮನಿಸಬಹುದು. ಅದರಲ್ಲೂ ಜ್ಞಾನದ ಸ್ವರೂಪವಾದ ಅರಳಿಮರವನ್ನೇ ನಾವು ದೈವ ಸ್ವರೂಪ ಎನ್ನುತ್ತೇವೆ. ನಮ್ಮ ಬಸವನಹಳ್ಳಿಯ ಅರಳಿಮರ ನಮ್ಮ ಶತಮಾನಗಳ ಸಾಕ್ಷಿ ಪ್ರಜ್ಞೆ ಎಂದು ಖ್ಯಾತ ನಿರೂಪಕಿ, ಸಂಸ್ಕೃತಿ ಚಿಂತಕಿ ಸುಮಾ ಪ್ರಸಾದ್ ಹೇಳಿದರು.
ಅವರು ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ಶಂಕರಮಠದಲ್ಲಿ ಕಲ್ಕಟ್ಟೆ ಪುಸ್ತಕದ ಮನೆ, ಸೂರಂಕಣ ವೇದಿಕೆ ಇತ್ತೀಚೆಗೆ ಆಯೋಜಿಸಿದ್ದ ನಾಗರಾಜರಾವ್ ಕಲ್ಕಟ್ಟೆಯವರು ಬರೆದು ರಾಗ ಸಂಯೋಜಿಸಿ ಪಂಚಮಿ ಚಂದ್ರಶೇಖರ್ ಜೊತೆ ಹಾಡಿದ `ಬಸವನಹಳ್ಳಿ ಅರಳಿಮರ’ ವೃಕ್ಷಗೀತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮೂರಿನ ಧಾರ್ಮಿಕ ಕೇಂದ್ರವೂ ಆಗಿರುವ ಈ ಅರಳಿಮರ ನಾಗಾರಾಧನೆ ಕಾರ್ತಿಕ ದೀಪೋತ್ಸವಗಳಿಗೂ ಸ್ಥಳ ಒದಗಿಸಿದೆ. ನೂರಾರು ಖಗ, ಕ್ರಿಮಿ ಕೀಟಗಳಿಗೆ ಆಶ್ರಯ ನೀಡಿರುವ ಈ ಮರ ಈ ನೆಲದ ಗುರುತಾಗಿದೆ. ಇದರ ಕುರಿತು ವಿಭಿನ್ನವಾದ ರೀತಿಯಲ್ಲಿ ಗೀತೆಯನ್ನು ಹೊರ ತಂದಿರುವ ನಾಗರಾಜರಾವ್ ಕಲ್ಕಟ್ಟೆ ನಿಜಕ್ಕೂ ಹೊಸ ಹೊಸ ಯೋಜನೆಗಳಿಂದ ಬೆರಗು ಮೂಡಿಸುತ್ತಿದ್ದಾರೆ. ನಾಗಭೂಷಣ್ ಕೆ.ಎನ್. ಅವರ ಹಿನ್ನೆಲೆ ಸಂಗೀತ ಮಾಧುರ್ಯದಿಂದ ಕೂಡಿದ ಎಂದು ಅವರು ನುಡಿದರು.
ಹಿರಿಯ ಕವಿ ಅರವಿಂದ ದೀಕ್ಷಿತ್ ಮಾತನಾಡಿ, ವಟವೃಕ್ಷವು ಪ್ರಾಣವಾಯುವನ್ನು ಅಧಿಕ ಪ್ರಮಾಣದಲ್ಲಿ ಬಿಡುಗಡೆ ಮಾಡುವುದಲ್ಲದೆ, ಸರ್ವ ಜೀವಿಗಳ ಆಯುರಾರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಅರಳಿಮರ ಸುತ್ತುವುದು ಧಾರ್ಮಿಕತೆ ಮಾತ್ರವಲ್ಲ, ವೈಜ್ಞಾನಿಕ ವಿಧಾನವೂ ಆಗಿದೆ ಎಂದರು.
ಸಾಹಿತಿ ರಮೇಶ್ ಬೊಂಗಾಳೆ ಮಾತನಾಡಿ, ವೃಕ್ಷರಾಜ ಎನ್ನಬಹುದಾದ ಅರಳಿಮರವನ್ನು ದೇವರು ಎನ್ನುವುದು, ದೇವರ ಕಾಡನ್ನು ಪೂಜಿಸುವುದು, ದೇವರಗುಡ್ಡವನ್ನು ಕಾಪಾಡಿಕೊಂಡು ಬರುವುದು ಎಲ್ಲವೂ ಪರಿಸರ ಸಂರಕ್ಷಣೆಯ ಸಂಕೇತ. ಅರಳಿಮರದ ಗೀತೆಯೂ ಇಂತಹ ಒಂದು ಅಪರೂಪದ ಕಾಳಜಿಯಾಗಿದೆ ಎಂದರು.
ಶಂಕರಮಠದ ಲಕ್ಷ್ಮೀನಾರಾಯಣ್ ಭಟ್ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು. ಶಿಕ್ಷಕಿಯರಾದ ಲತಾ ರಮೇಶ್, ವೇದಾ ಅಶೋಕ್, ನಾಟಿ ವೈದ್ಯೆ ಶಾಂತಾ ಮಲ್ಲೇಶರಾವ್, ಗಾಯಕಿ ಅನುಷ ಅಂಚನ್, ಸಂಬಾರ ಮಂಡಳಿಯ ನಿವೃತ್ತ ಅಧಿಕಾರಿ ರೊನಾಲ್ಡ್, ಛಾಯಾಗ್ರಾಹಕ ಎ.ಎನ್.ಮೂರ್ತಿ, ಗಾಯಕಿ ವಾಸಂತಿ ಪದ್ಮನಾಭ್ ಮೊದಲಾದವರು ಉಪಸ್ಥಿತರಿದ್ದರು. ವೈಷ್ಣವಿ ಎನ್.ರಾವ್ ಸ್ವಾಗತಿಸಿದರು. ನಾಗರಾಜರಾವ್ ಕಲ್ಕಟ್ಟೆ ನಿರೂಪಿಸಿದರು. ಗೀತೆಯ ನಿರ್ಮಾಪಕಿ ರೇಖಾ ನಾಗರಾಜರಾವ್ ಅವರು ವಂದಿಸಿದರು.
“Basavanahalli Aralimara” tree song dedicated to the world