ಚಿಕ್ಕಮಗಳೂರು: : ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷಣೆಯೊಂದಿಗೆ ಇಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ತಿಳಿಸಿದರು.
ಅವರು ಇಂದು ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ೦೧-೧೧-೧೯೭೩ ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಇಂದಿಗ ಸುವರ್ಣ ಮಹೋತ್ಸವ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಇದಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರು, ಕುವೆಂಪು, ಬಿ.ಎಂ ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಂತಾದ ಮಹನೀಯರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಎಲ್ಲರೂ ಒಟ್ಟಾಗಿ ಜಾತಿ, ಮತ, ಬೇಧವಿಲ್ಲದೆ ಕನ್ನಡ ರಾಜ್ಯೋತ್ಸವವನ್ನು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡುವುದರ ಜೊತೆಗೆ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ನಾಡಗೀತೆ ಹಾಡುವಾಗ ಮೈ ರೋಮಾಂಚನವಾಗುತ್ತದೆ ಎಂದರು.
ಕನ್ನಡ ಬಾವುಟದಲ್ಲಿರುವ ಹಳದಿ ಸಂತೋಷ, ಶಾಂತಿಯನ್ನು ಸೂಚಿಸಿದರೆ, ಕೆಂಪು ಬಣ್ಣ ಧೈರ್ಯವನ್ನು ಸೂಚಿಸುತ್ತದೆ. ಕರ್ನಾಟಕದ ಕ್ರಾಂತಿಕಾರರು ಶಾಂತಿಗೂ ಸಿದ್ಧ-ಕ್ರಾಂತಿಗೂ ಬದ್ಧರಾಗಿದ್ದಾರೆ. ಗಡಿನಾಡು ಸಮಸ್ಯೆಗಳು ಶೀಘ್ರ ಇತ್ಯರ್ಥವಾಗಿ ಎಲ್ಲರೂ ಒಗ್ಗಟ್ಟಿನಿಂದ ಜೀವಿಸುವಂತಾಗಲಿ ಎಂದು ಹಾರೈಸಿದರು.
ಮೊದಲಿಗೆ ಸ್ವಾಗತಿಸಿದ ಸಂಘದ ಗೌರವ ಕಾರ್ಯದರ್ಶಿ ಅಮಿತ ವಿಜೇಂದ್ರ ಮಾತನಾಡಿ, ನ.೧ ರಂದು ಹಲವಾರು ಭಾಷಾ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದುಗೂಡಿ ವಿಶಾಲ ಕರ್ನಾಟಕವಾಗಿ ಪ್ರಸಕ್ತ ವರ್ಷಕ್ಕೆ ೫೦ ವರ್ಷಗಳು ತುಂಬುತ್ತಿರುವುದರಿಂದ ಸುವರ್ಣ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದರು.
ಕನ್ನಡ ರಾಜ್ಯೋತ್ಸವ ಆಚರಣೆ ಸಿರಿಗನ್ನಡ ನಾಡು ಗಂಧದ ಬೀಡು, ಕರ್ನಾಟಕ ಕುವೆಂಪು ಅವರು ಕನ್ನಡಕ್ಕೆ ಹೋರಾಡು ಕನ್ನಡ ಕಂದ ಎಂದು ಹೇಳಿದ್ದಾರೆ. ಇನ್ನೋರ್ವ ಸಾಹಿತಿ ಹಚ್ಚೇವು ಕನ್ನಡದ ದೀಪ ಎಂಬ ಸಾಲುಗಳು ಕನ್ನಡದ ಅಭಿಮಾನವನ್ನು ಬಿಂಬಿಸುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಹಕಾರ್ಯದರ್ಶಿ ಕೋಮಲಾರವಿ, ತೀರ್ಪುಗಾರರಾಗಿ ಜೆವಿಎಸ್ ಶಾಲಾ ಶಿಕ್ಷಕಿಯರಾದ ಲೀಲಾವತಿ, ಶ್ರೀಲತ, ನಿರ್ದೇಶಕರುಗಳಾದ ಮಂಜುಳಹರೀಶ್, ಚಂಪಾಜಗದೀಶ್, ಡಿ.ಬಿ ಶಕುಂತಲಾವಿರೇಗೌಡ, ರಾಜೇಶ್ವರಿ ಅಭಿಷೇಕ್, ವೇದ ಚಂದ್ರಶೇಖರ್, ಹೆಚ್.ಬಿ ಲಕ್ಷ್ಮೀ, ಮಾಜಿ ಅಧ್ಯಕ್ಷೆ ಹರಿಣಾಕ್ಷಿನಾಗರಾಜ್, ಮಾಜಿ ಕಾರ್ಯದರ್ಶಿ ಆರತಿನಾರಾಯಣ್ ಉಪಸ್ಥಿತರಿದ್ದರು.
Kannada Rajyotsava celebration by Mahila Okkaligara Association