ಚಿಕ್ಕಮಗಳೂರು: ಭಾರತ ದೇಶಕ್ಕೆ ಕಾಫಿ ಉದ್ಯಮ ಮತ್ತು ಬೆಳೆಗಾರರ ಬೆವರಿನ ಫಲವಾಗಿ ಅತೀ ಹೆಚ್ಚು ವಿದೇಶಿ ವಿನಿಮಯ ಕೇಂದ್ರ ಸರ್ಕಾರಕ್ಕೆ ಬರುತ್ತಿದ್ದು, ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ವ್ಯವಸ್ಥೆಯನ್ನು ಆಡಳಿತ ನಡೆಸುವ ಅಧಿಕಾರಿಗಳು ಜಾರಿಮಾಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮನವಿ ಮಾಡಿದರು.
ಅವರು ಇಂದು ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲೆಯ ಎಲ್ಲಾ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಲಸೆ ಕಾರ್ಮಿಕರಿಗೆ ಕಾಫಿ ಬೆಳೆಗಾರರು ಸೌಜನ್ಯದಿಂದ ಎಲ್ಲಾ ರೀತಿಯ ಸೌಲಭ್ಯಗಳ ಜೊತೆಗೆ ಕೆಲಸ ಕೊಟ್ಟು ಉತ್ತಮ ವೇತನ ನೀಡಿ ಇಷ್ಟು ವರ್ಷಗಳಿಂದ ಪೋಷಣೆ ಮಾಡಿದ್ದೇವೆ. ಆದರೆ ಹಿಂದೆ ಯಾವುದೇ ಸರ್ಕಾರದ ಪ್ರಾಯೋಜಕತ್ವದ ಸಹಾಯ ಕಾಫಿ ಬೆಳೆಗಾರರಿಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಫಿ ಬೆಳೆಗಾರರ ಬದುಕಿಗೆ ಮತ್ತು ಕಾಫಿ ತೋಟಗಳ ನಿರ್ವಹಣೆಗೆ ವಲಸೆ ಕಾರ್ಮಿಕರು ಆಸರೆ ಆಗಿದ್ದರು. ಅದಕ್ಕೆ ನಾವೆಲ್ಲರೂ ಕೊಡುಗೆ ನೀಡಿದ್ದೇವೆ. ಜೊತೆಗೆ ಕಾರ್ಮಿಕರ ಹಸಿವು ನೀಗಿಸುವ ಕೆಲಸವನ್ನು ಬೆಳೆಗಾರರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇಂದು ಕಾರ್ಮಿಕರ ಕೊರತೆಯ ಜೊತೆಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಅದಕ್ಕೆ ಪೂರಕವಾಗಿ ದೇಶದ ಬೇರೆ ಬೇರೆ ಭಾಗದಿಂದ ಕಾರ್ಮಿಕರು ಆಗಮಿಸುತ್ತಿದ್ದು ಇವರನ್ನು ಬರುವುದು ಬೇಡ ಎಂದು ಹೇಳುವ ಬದಲಾಗಿ ಕಾರ್ಮಿಕರಿಂದ ಪೂರಕ ದಾಖಲೆಗಳನ್ನು ಪಡೆಯಬೇಕೆಂಬುದು ನಿಯಮವಾಗಿದೆ ಎಂದರು.
ನಾಗರಿಕ ಬಂದೂಕು ಪರವಾನಗಿ ನವೀಕರಣ ಮಾಡುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಸಾಗಾಣೆ ಮಾಡುತ್ತಿದ್ದಾಗ ತಡೆದು ಬಂದೂಕು ವಶಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಇದು ಅನಿವಾರ್ಯವಾಗಿದ್ದರೂ ಇಲಾಖೆಯೊಂದಿಗೆ ಸಹಕರಿಸುವುದು ಬೆಳೆಗಾರರ ಕರ್ತವ್ಯ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಮಾತನಾಡಿ, ಜಿಲ್ಲೆಯಲ್ಲಿ ತುಂಬಾ ಬೇಡಿಕೆ ಇರುವ ನಾಗರೀಕ ಬಂದೂಕು ತರಬೇತಿಯನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ಜನವರಿಯಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದ್ದೇವೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಸುಮಾರು ೧೦ ಸಾವಿರ ಪರವಾನಗಿ ಸಹಿತ ಬಂದೂಕುಗಳಿವೆ, ಈ ಪೈಕಿ ಪರವಾನಗಿ ಪಡೆದಿರುವವರಲ್ಲಿ ಬಹುತೇಕರಿಗೆ ಬಂದೂಕು ಉಪಯೋಗಿಸುವ ಕುರಿತು ತರಬೇತಿ ಹೊಂದಿಲ್ಲ ಎಂಬುದು ಪರಿಶೀಲಿಸಿದಾಗ ತಿಳಿದುಬಂದಿದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಈ ತರಬೇತಿಯನ್ನು ನೀಡಲಾಗಿಲ್ಲ, ಜಿಲ್ಲೆಯಲ್ಲಿ ಮೂರು ಭಾಗದಲ್ಲಿ ತರಬೇತಿ ನೀಡಲು ಯೋಜನೆ ರೂಪಿಸಿದ್ದು, ಈ ಅವಧಿಯಲ್ಲಿ ತರಬೇತಿ ಪಡೆದವರು ಮನೆಯಲ್ಲಿರುವ ಬಂದೂಕು ಸಾಗಾಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ಕಾಫಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ಸರಿಯಾದ ವೇದಿಕೆ ಈವರೆಗೆ ಸಿಕ್ಕಿರಲಿಲ್ಲ. ಅದು ಇಂದು ಕೂಡಿಬಂದಿದೆ, ಬಂದೂಕು ಪರವಾನಗಿ ದುರುಪಯೋಗವಾಗುತ್ತಿದೆ, ಚುನಾವಣೆ ಸಂದರ್ಭದಲ್ಲಿ ಡಿಪಾಜಿಟ್ ಮಾಡಲು ಸೂಚಿಸಿದರೂ ಹಿಂಜರಿಯುತ್ತಿದ್ದಾರೆ ಎಂದು ವಿಷಾಧಿಸಿದರು.
ವಲಸೆ ಕಾರ್ಮಿಕರು ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಯ ಕಾಫಿ ತೋಟಗಳಿಗೆ ಆಗಮಿಸುತ್ತಿದ್ದಾರೆ ಆದರೆ ಕಾಫಿ ಬೆಳೆಗಾರರು ಕಾರ್ಮಿಕರ ಸಂಪೂರ್ಣ ದಾಖಲೆ ಪರಿಶೀಲಿಸಿ ನಿರ್ವಹಣೆ ಮಾಡುವ ಜೊತೆಗೆ ಅವರ ಆಧಾರ್, ಓಟರ್ ಐಡಿ, ಪಡಿತರ ಚೀಟಿ ಮುಂತಾದ ದಾಖಲೆಗಳನ್ನು ಪಡೆದು ಸ್ಥಳೀಯ ಪೊಲೀಸ್ ಇಲಾಖೆಗೆ ನೀಡಿದಾಗ ವಲಸೆ ಕಾರ್ಮಿಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರೇ, ಇಲ್ಲವೇ ಎಂಬುದು ತಿಳಿಯುತ್ತದೆ ಎಂದರು.
ಕಾಫಿ ತೋಟಕ್ಕೆ ಸಂಬಂಧಿಸಿದ ಕಾಫಿ ಬೆಳೆಗಾರರು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುವ ಜೊತೆಗೆ ಪಿಎಸ್ಐ, ಆರ್ಎಫ್ಓ, ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಲು ಸಹಕಾರಿಯಾಗುತ್ತದೆ. ವಲಸೆ ಕಾರ್ಮಿಕರಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಹತ್ತಿರದ ಠಾಣೆಗೆ ದೂರು ಸಲ್ಲಿಸಿ ವಿವರ ನೀಡುವಂತೆ ಮನವಿ ಮಾಡಿದರು. ಬಂದೂಕು ಪರವಾನಗಿ ಪಡೆದವರು ಬೇರೆಯವರಿಗೆ ಗನ್ಗಳನ್ನು ಕೊಡಬಾರದು, ಅಪಾಯ ಸಂಭವಿಸಿದಾಗ ಪರವಾನಗಿ ಯಾರ ಹೆಸರಿನಲ್ಲಿರುತ್ತದೋ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಟಿ ಮೋಹನ್ ಕುಮಾರ್ ಮಾತನಾಡಿ, ಕಾಫಿ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ವೆಂಕಟರೆಡ್ಡಿ, ರತೀಶ್ ಕುಮಾರ್, ಉತ್ತಮ್, ಟಿ.ಡಿ ಮಲ್ಲೇಶ್, ಬಾಲಕೃಷ್ಣ, ಮನೋಹರ್, ಎಂ.ಎಸ್.ಲಿಂಗಪ್ಪಗೌಡ, ಹೆಚ್.ಎಂ ಶ್ರೀಧರ್, ಮಹೇಂದ್ರ, ವೆಂಕಟೇಗೌಡ, ರತ್ನಾಕರ್, ಸುರೇಶ್, ಜಯರಾಜ್, ನಾಗಭೂಷಣ್, ಕೊಳಗಾವೆ ರವಿ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಸ್ವಾಗತಿಸಿದರು.
A special meeting of all the coffee growers of the district and the coffee board