ಚಿಕ್ಕಮಗಳೂರು: ತೇರಾಪಂಥ್ ಧರ್ಮ ಸಂಘದ ಸ್ಥಾಪಕರಾದ ಆಚಾರ್ಯ ಭಿಕ್ಷು ಅವರ ಶಿಷ್ಯರಾದ ಮುನಿಶ್ರಿ ಮೋಹಜಿತ್ ಕುಮಾರ್ ಜೀ ಅವರ ೫೦ನೇ ಧೀಕ್ಷ ಮಹೋತ್ಸವದ ಕಾರ್ಯಕ್ರಮವನ್ನು ನ.೭ ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ತೇರಾಪಂಥ್ ಸಭಾದ ಅಧ್ಯಕ್ಷ ಮಹೇಂದ್ರ ಡೋಸಿ ತಿಳಿಸಿದರು.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಮುನಿಶ್ರಿ ಮೋಹಜಿತ್ ಕುಮಾರ್ ಜೀ ಅವರು ೧೭ನೇ ವಯಸ್ಸಿನಲ್ಲಿ ಧೀಕ್ಷೆಯನ್ನು ಪಡೆದು ಸ್ವಯಂ ಸನ್ಯಾಸತ್ವ ಜೀವನ ನಡೆಸುತ್ತಿದ್ದಾರೆ. ಆಗಿನ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಾಲ್ಕು ಸಂಪ್ರದಾಯಗಳ ಸಮಕ್ಷಮದಲ್ಲಿ ತೇರಾಪಂಥ್ ಧರ್ಮಸಂಘದ ೯ನೇ ಆಚಾರ್ಯರುಗಳಾದ ಆಚಾರ್ಯ ತುಳಸಿರವರ ಹಸ್ತದಿಂದ ಧೀಕ್ಷೆಯನ್ನು ಪಡೆದಿದ್ದರು ಎಂದು ಹೇಳಿದರು.
ನ.೭ ಕ್ಕೆ ಧೀಕ್ಷೆಯನ್ನು ಪಡೆದು ೫೦ ವರ್ಷಗಳು ತುಂಬುತ್ತಿರುವ ಈ ಸುವರ್ಣ ಮಹೋತ್ಸವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ತೇರಾಪಂಥ್ ಧರ್ಮಸಂಘದಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಮರುಳಸಿದ್ಧ ಸ್ವಾಮೀಜಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಹೆಚ್.ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ, ಪಲ್ಲವಿ ರವಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ರೈಲ್ವೆ ದಕ್ಷಿಣ ವಲಯದ ಮೈಸೂರು ವಿಭಾಗದ ಸಹಾಯಕ ಆಯುಕ್ತರಾದ ಉಮಾದೇವಿ ಹಾಗೂ ಅಖಿಲ ಭಾರತ ತೇರಾಪಂಥ್ ಯುವ ಪರಿಷತ್ ಉಪಾಧ್ಯಕ್ಷ ಪವನ್ ಜೀ ಮಾಂಡೋ ಇವರುಗಳು ಭಾಗವಹಿಸಲಿದ್ದಾರೆ ಎಂದರು.
ಮುನಿಶ್ರಿ ಮೋಹಜಿತ್ ಕುಮಾರ್ ಜೀ ಅವರು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಗಮನಾರ್ಹ ಸಾಧನೆ ಮಾಡಿದ್ದು, ಅವರ ಆಧ್ಯಾತ್ಮಿಕ ಜೀವನವನ್ನು ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಅವು ಉದ್ವಿಗ್ನತೆಯ ನಡುವೆ ಶಾಂತಿಯ ಸಂದೇಶ, ವಿಚಲಿತ ಮನಸ್ಸು ಮತ್ತು ಅಸಮತೋಲನ ಜೀವನಕ್ಕೆ ಸಮಾಧಿಯ ಧ್ವನಿ. ಇದು ಚಂಚಲ ಮನಸ್ಸಿಗೆ ಏಕಾಗ್ರತೆಯ ಸ್ಪೂರ್ತಿ. ಅಂತಹ ಸಾಧು ಪ್ರಜ್ಞೆಯು ತಾನಾಗಿಯೇ ಜಾಗೃತಗೊಂಡು ಎಲ್ಲರೊಳಗೂ ಬೆಳಕನ್ನು ಬೆಳಗಿಸಲು ಪ್ರಯತ್ನಿಸುತ್ತಿದೆ ಎಂದು ಬಣ್ಣಿಸಿದರು.
Mohajit Kumar Ji Dhiksha Mahotsav at Kalamandir on Nov. 7