ಚಿಕ್ಕಮಗಳೂರು: ರಾಜ್ಯ ಸರ್ಕಾರದ ಮಹತ್ವ ಪೂರ್ಣ ಪಂಚಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಮತ್ತು ಅಸಹಾಯಕ ಕುಟುಂಬಗಳಿಗೆ ವರದಾನವಾಗಿ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಎಂ.ಸಿ. ಶಿವನಂದ ಸ್ವಾಮಿ ಅವರು ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಆಯೋಜಿಸಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅನ್ನಭಾಗ್ಯ ಯೋಜನೆಯಡಿ ಜುಲೈ ೨೦೨೩ ರಿಂದ ಜುಲೈ ೨೦೨೪ ರವರೆಗೆ ಜಿಲ್ಲೆಯಲ್ಲಿ ಒಟ್ಟು ೭,೯೯,೭೮೭ ಫಲಾನುಭವಿಗಳಿಗೆ ಪ್ರತಿ ತಿಂಗಳು ೧೩ ಕೋಟಿಯಂತೆ ಒಟ್ಟು ಇದುವರೆಗೂ ೧೬೫ ಕೋಟಿ ರೂ. ಗಳ ಸಹಾಯಧನ ನೀಡಲಾಗಿದ್ದು, ಶೇ ೯೮ ರಷ್ಟು ಪ್ರಗತಿ ಆಗಿದೆ ಎಂದ ಅವರು ಶಕ್ತಿ ಯೋಜನೆಯಲ್ಲಿ ಸಾರಿಗೆ ಇಲಾಖೆ ಬಸ್ಗಳಲ್ಲಿ ಜಿಲ್ಲೆಯಲ್ಲಿ ಇದುವರೆಗೂ ೨,೯೦,೬೪,೭೫೮ ಮಹಿಳೆಯರು ಪ್ರವಾಸ ಮಾಡಿ ೧೨ ಕೋಟಿ ರೂ. ಗಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಹೇಳಿದರು.
ಗೃಹ ಜ್ಯೋತಿ ಆಗಸ್ಟ್ ೨೦೨೩ ರಿಂದ ಸೆಪ್ಟೆಂಬರ್ ೨೦೨೪ ರವರೆಗೆ ೩೦,೪೮,೨೫ ಮನೆಗಳಿಗೆ ಉಚಿತ ಯೋಜನೆಯಿಂದ ೧೪೭ ಕೋಟಿ ರೂ. ಗಳನ್ನು ಒದಗಿಸಲಾಗಿದ್ದು, ೨,೧೪,೧೨೦ ಮನೆಗಳಿಗೆ ಜೀರೋ ಬಿಲ್ ಸೌಲಭ್ಯ ದೊರೆತಿದೆ ಎಂದ ಅವರು ಆಗಸ್ಟ್ ೨೦೨೩ ರಿಂದ ಆಗಸ್ಟ್ ೨೦೨೪ ರವರೆಗೂ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ ೬೫೭ ಕೋಟಿ ರೂ. ಗಳ ಸರ್ಕಾರದಿಂದ ಫಲಾನುಭವಿಗಳಿಗೆ ೨,೬೮,೯೪೮ಗಳ ಆಕೌಂಟ್ಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದ್ದು, ನೊಂದಾಯಿಸಿರುವ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಲಾಭ ಪಡೆಯಲು ಕೆಲ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಶೇ. ನೂರಕ್ಕೆ ನೂರು ಪ್ರಗತಿ ಸಾಧಿಸಲು ಕ್ರಮಕೈಗೊಳ್ಳಲಾಗಿದೆ. ಯುವ ನಿಧಿ ಯೋಜನೆಯಡಿ ಜಿಲ್ಲೆಯ ೮೪೫೭ ನಿರುದ್ಯೋಗಿಗಳು ನೋಂದಾಯಿಸಿದ್ದು, ೫೩ ಕೋಟಿ ರೂ.ಗಳ ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ಗ್ಯಾರಂಟಿ ಯೋಜನೆ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಆದಾಲತ್ಗಳನ್ನು ಮಾಡುವುದರ ಮೂಲಕ ಸರ್ಕಾರ ಯೋಜನೆಗಳನ್ನು ಎಲ್ಲ ಮನೆ ಕುಟುಂಬಗಳಿಗೆ ದೊರಕಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲೆ ಹಾಗೂ ತಾಲ್ಲೂಕ್ಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್. ಕೀರ್ತನಾ ಅವರು ಮಾತನಾಡಿ ಸರ್ಕಾರ ಜಾರಿಗೆ ತಂದಿರುವ ಉಪಯುಕ್ತ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ಹಳ್ಳಿಗಳ ಪ್ರತಿ ಮನೆ ಮನೆಗಳಿಗೆ ತಿಳಿಸುವುದು ಹಾಗೂ ಅರಿವು ಮೂಡಿಸುವ ಕೆಲಸ ಅನುಷ್ಠಾನ ಸಮಿತಿ ಸದಸ್ಯರು ಸೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಲ್ಲಾ ಜನಪ್ರತಿನಿಧಿಗಳು ಸೇರಿ ಗ್ರಾಮ ಸಭೆಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕೆಲಸ ಬಹಳ ಅಗತ್ಯವಾಗಿದೆ ಎಂದ ಅವರು.
ಸರ್ಕಾರಿ ಅಧಿಕಾರಿಗಳು – ನೌಕರರು ತಮ್ಮ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕು ಸರ್ಕಾರ ಯೋಜನೆಗಳನ್ನು ಜನ ಸಾಮಾನ್ಯರಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಕಾಲದಲ್ಲಿ ಅವರಿಗೆ ಸೇವೆ ಒದಗಿಸಿದಾಗ ಮಾತ್ರ ಯೋಜನೆಗಳಿಗೆ ಸಾರ್ಥಕತೆ ದೊರಕುತ್ತದೆ ಎಂದ ಅವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿರುವ ಗ್ರಂಥಾಲಯಗಳ ಸೇವೆ ಹಾಗೂ ಸರ್ಕಾರಿ ಯೋಜನೆಗಳ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿ. ಪಂ. ಯೋಜನಾಧಿಕಾರಿ ರಾಜಗೋಪಾಲ್ ಜಿಲ್ಲಾ ಉಪಾಧ್ಯಕ್ಷರುಗಳಾದ ಹೇಮಾವತಿ, ಅವ್ವಳ್ಳಿ ಕೃಷ್ಣೇಗೌಡ ಎಸ್.ಎನ್. ಮಂಜುನಾಥ್, ವಿವಿಧ ತಾಲ್ಲೂಕು ಅಧ್ಯಕ್ಷರುಗಳಾದ ಮಲ್ಲೇಶ್, ಎನ್.ಜಿ. ರಮೇಶ್, ಚಂದ್ರಮ್ಮ ಸದಸ್ಯರುಗಳಾದ, ಜೇಮ್ಸ್ ಡಿಸೋಜ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Review Meeting of Government Guarantee Schemes