ಚಿಕ್ಕಮಗಳೂರು: ಜಿಲ್ಲಾ ಶ್ವಾನ ದಳದಲ್ಲಿ ೧೦ ವರ್ಷ ೭ ತಿಂಗಳು ಸ್ಪೋಟಕ ಪತ್ತೆ ಶ್ವಾನವಾಗಿ ಕಾರ್ಯನಿರ್ವಹಿಸಿದ್ದ ಪೃಥ್ವಿ ಗುರುವಾರ ವಯೋ ನಿವೃತ್ತಿ ಹೊಂದಿದ್ದು, ಎಸ್ಪಿ ವಿಕ್ರಮ ಅಮಟೆ, ಎಎಸ್ಪಿ ಕೃಷ್ಣಮೂರ್ತಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಸ್ಪಿ ಕಚೇರಿಯಲ್ಲಿ ಗುರುವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.
೨೦೧೪ರ ಜನವರಿ ೨ರಂದು ಜನಿಸಿದ್ದ ಪೃಥ್ವಿ ೨೦೧೪ರ ಮಾರ್ಚ್ ರಂದು ಪೊಲೀಸ್ ಶ್ವಾನ ದಳಕ್ಕೆ ಸ್ಫೋಟಕ ಪತ್ತೆ ಶ್ವಾನವಾಗಿ ಸೇರ್ಪಡೆಗೊಂಡಿತ್ತು. ಶ್ವಾನದ ಹ್ಯಾಂಡ್ಲರ್ಗಳಾಗಿ ವಿ.ದಿನೇಶ್, ವಿ.ಕೆ.ಲೋಕೇಶಪ್ಪ ನೇಮಕಗೊಂಡಿದ್ದರು. ಈ ಶ್ವಾನವು ಸಿಎಆರ್ ದಕ್ಷಿಣ, ಆಡುಗೋಡಿ, ಬೆಂಗಳೂರಿನಲ್ಲಿರುವ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿತ್ತು.
ಪೃಥ್ವಿ ತನ್ನ ೧೦ ವರ್ಷ ೦೭ ತಿಂಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧ ಬಂದೋಬಸ್ತ್ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿ ಉನ್ನತ ಬಂದೋಬಸ್ತ್ ಗಳಲ್ಲಿ ವಿಐಪಿ ಮತ್ತು ವಿವಿಐಪಿ ಅವರ ಭದ್ರತೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆಗೆ ಸಹಕರಿಸಿದೆ. ಚಿಕ್ಕಮಗಳೂರು ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶವಾಗಿದ್ದು ಹಾಗೂ ಪ್ರವಾಸಿ ತಾಣವಾಗಿದ್ದು ನಕ್ಸಲ್ ಕಾರ್ಯಾಚರಣೆ ಕರ್ತವ್ಯದಲ್ಲಿಯೂ ಭಾಗವಹಿಸಿರುವುದು ವಿಶೇಷ.
ಪೊಲೀಸ್ ಇಲಾಖೆಯಿಂದ ವಾರ್ಷಿಕವಾಗಿ ನಡೆಸಲಾಗುವ ಪೊಲೀಸ್ ಡ್ಯೂಟಿ ಮೀಟ್ನಲ್ಲಿ ೨೦೧೯ರಲ್ಲಿ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಂಚಿನ ಪದಕವನ್ನು ಪಡೆದಿದೆ. ಚಿಕ್ಕಮಗಳೂರು ೨೦೨೨ರಲ್ಲಿ ಜಿಲ್ಲಾಡಳಿತದಿಂದ ನಡೆಸಲಾದ ಚಿಕ್ಕಮಗಳೂರು ಹಬ್ಬದ ಡಾಗ್ ಶೋನಲ್ಲಿ ಭಾಗವಹಿಸಿತ್ತು. ಚಿಕ್ಕಮಗಳೂರು ಜಿಲ್ಲೆಯ ಎನ್ಸಿಸಿ ಮತ್ತು ಎನ್ಎಸ್ಎಸ್ ಕ್ಯಾಂಪ್ಗಳಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಶ್ವಾನಗಳ ಕರ್ತವ್ಯದ ಬಗ್ಗೆ ವಿವರಣೆ ಕರ್ತವ್ಯದ ಬಗ್ಗೆ ಡಾಗ್ ಶೋ ನೀಡಿದೆ.
A fond farewell to the police dog