ಚಿಕ್ಕಮಗಳೂರು: : ದೇಶವನ್ನು ಉಳಿಸಲು ನಾವು ಬಿಜೆಪಿಯನ್ನು ಕಟ್ಟುತ್ತಿದ್ದೇವೆ ಎಂದು ಯೋಚನೆ ಮಾಡಿದರೆ ನಮ್ಮ ಸಿದ್ಧಾಂತಿಕ ವಿಚಾರಗಳಿಗೆ ಶಕ್ತಿ ಬರುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಸ್ತಾರೆ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬಹಳ ಜನರು ಬೇರೆ ಬೇರೆ ದೇಶಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಚೀನಾ ನಮಗಿಂತ ಮುಂದಿದೆ ಎನ್ನುವವರಿದ್ದಾರೆ. ಆದರೆ ಅಲ್ಲಿ ದೇಶದ ಪ್ರಶ್ನೆ ಬಂದಾಗ ಎರಡು ಮಾತನಾಡಲು ಅವಕಾಶವೇ ಇಲ್ಲ. ಆ ಹಿನ್ನೆಲೆಯಲ್ಲಿ ನಮ್ಮ ಭಾರತದ ಬದುಕನ್ನ ನೋಡಬೇಕಾದ ಅಗತ್ಯವಿದೆ ಎಂದರು.
ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ಕೇಂದ್ರ ಸರ್ಕಾರ ದೇಶಕ್ಕಾಗಿ ಬಡಿದಾಡುತ್ತಿದ್ದರೆ. ಕರ್ನಾಟದಲ್ಲಿ ಕೆಂಗಲ್ ಹನುಮಂತಯ್ಯನವರು ಕಟ್ಟಿದ ಪ್ರಜಾಪ್ರಭುತ್ವದ ದೇಗುಲ ವಿಧಾನ ಸೌಧದಲ್ಲಿ ನಿಂತು ಪಾಕಿಸ್ಥಾನಕ್ಕೆ ಜೈ ಎಂದು ಕೂಗುತ್ತಾರೆ ಎಂದು ಯೋಚನೆ ಮಾಡಿದರೆ ನಮ್ಮ ಮುಂದಿನ ತಲೆ ಮಾರಿನ ಬಗ್ಗೆ ಯೋಚನೆ ಉಂಟಾಗುತ್ತದೆ ಎಂದರು.
ದೇಶಕಟ್ಟುವ ಒಂದು ಭಾಗವಾಗಿ ನಮ್ಮ ಹಿರಿಯರು ಭಾರತೀಯ ಜನತಾ ಪಕ್ಷವನ್ನು ಕಟ್ಟಿದ್ದಾರೆ. ಇಂದು ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಬಿಜೆಪಿಯ ವಿಚಾರಧಾರೆಯನ್ನು ನಾವು ಗಟ್ಟಿಗೊಳಿಸದೇ ಇದ್ದಲ್ಲಿ, ನಾವೆಲ್ಲರೂ ಮುಕ್ತವಾಗಿ ಪಕ್ಷವನ್ನು ಬೆಂಬಲಿಸದೇ ಇದ್ದಲ್ಲಿ ಮುಂದಿನ ತಲೆಮಾರು ಈ ದೇಶದಲ್ಲಿ ಬದುಕುವುದು ಕಷ್ಟವಿದೆ ಎನ್ನುವ ಅಭಿಪ್ರಾಯ ಸಾಮಾನ್ಯ ಜನರು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನಿನ್ನೆ ಮೊನ್ನೆ ವರೆಗೆ ಒಂದು ಎಕರೆ ಜಾಗವಿದೆ ಎಂದು ನೆಮ್ಮದಿಯಲ್ಲಿದ್ದೆ, ಮಕ್ಕಳಿಗೆಲ್ಲಾ ಪಾಠ ಮಾಡಿಕೊಂಡು ಮಠಾಧೀಶರೊಬ್ಬರು ನೆಮ್ಮದಿಯಲ್ಲಿದ್ದರು. ಹಾಗೇ ರೈತರು ನಮ್ಮ ಬಳಿ ಒಂದಷ್ಟು ಹೊಲ, ಗದ್ದೆ ಉಂಟು, ಉಳುಮೆ ಮಾಡುತ್ತೇನೆ. ಬಿತ್ತುತ್ತೇನೆ. ಬೆಳೆಯುತ್ತೇನೆ ಎಂದು ಕೊಂಡಿದ್ದರು. ಆದರೆ ರಾತ್ರಿ ಬೆಳಗಾಗುವುದರೊಳಗೆ ಸಚಿವ ಜಮೀರ್ ಅಹಮದ್ ಕಾರಣದಿಂದಾಗಿ ಇಡೀ ಕರ್ನಾಟಕದಲ್ಲಿರುವ ರೈತರು, ಮಠ-ಮಂದಿರಗಳ ಸ್ವಾಮೀಜಿಗಳು ಕಂಗಾಗಲಾಗಿದ್ದಾರೆ. ನಮ್ಮ ನೆಮ್ಮದಿ ಹಾಳಾಗಿದೆ ಎಂದು ರೈತರು ಬೀದಿಗಿಳಿದಿದ್ದಾರೆ. ಸಾಮಾನ್ಯ ಜನರಿಗೆ ನಾನು ನಿಂತಿರುವ ಭೂಮಿ ನನ್ನದಲ್ಲ ಎನ್ನುವ ಅಭದ್ರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸದೇ ಇದ್ದಲ್ಲಿ ಈ ದೇಶದಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಬಂದಿದೆ ಎಂದರು.
ಒಂದೆಡೆ ಶಕ್ತಿಶಾಲಿ, ಸ್ವಾಭಿಮಾನಿ ಭಾರತವನ್ನ ನಿರ್ಮಾಣ ಮಾಡುವ ಶ್ರಮ ಕೇಂದ್ರ ಸರ್ಕಾರದಿಂದ ಆಗುತ್ತಿದ್ದರೆ, ನೀನು ನಿಂತಿರುವ ನೆಲ ನಿನ್ನದಲ್ಲ ಎಂದು ಇಲ್ಲಿ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ ಎಂದು ದೂರಿದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪುಗೊಳ್ಳಬೇಕಿದೆ. ನಮ್ಮ ಧರ್ಮವನ್ನು ಕಾಪಾಡಲು ಬಿಜೆಪಿ, ಆರ್ಎಸ್ಎಸ್, ಬಜರಂಗದಳ, ವಿಶ್ವಹಿಂದೂ ಪರಿಷತ್ ಪಣತೊಟ್ಟು ಹೋರಾಡುತ್ತಿವೆ ಎಂದರು.
ದೇಶಾಧ್ಯಂತ ನಮ್ಮ ಮೇಲೆರಗುತ್ತಿರುವ ವಕ್ಫ್ ಹಾವಳಿ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳದೆ ಹೋಗಿದ್ದರೆ ಪರಿಸ್ಥಿತಿ ಬಹಳಷ್ಟು ಹದಗೆಡುತ್ತಿತ್ತು. ರೈತರು, ಸಾಮಾನ್ಯ ಜನರಿಗೆ, ಹಿಂದೂಗಳಿಗೆ ಅನ್ಯಾಯ ಆಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಸಚಿವ ಜಮೀರ್ ಅಹಮದ್ ಅವರೊಂದಿಗೆ ಕೃಷ್ಣೇಭೈರೇಗೌಡ, ಅಧಿಕಾರಿಗಳು ಸೇರಿಕೊಂಡು ಕೇವಲ ಮೂರು ದಿನಗಳಲ್ಲಿ ಸಾಕಷ್ಟು ಆಸ್ತಿಗಳನ್ನ ವಕ್ಫ್ ಎಂದು ದಾಖಲೆ ಮಾಡಿದ್ದಾರೆ. ರಾಜಕೀಯವನ್ನು ಎಲ್ಲರೂ ಮಾಡಬೇಕು. ಆದರೆ ಈ ರೀತಿಯ ರಾಜಕಾರಣವನ್ನ ಯಾರೂ ಮಾಡಬಾರದು ಇದರ ವಿರುದ್ಧ ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಸಜ್ಜಾಗಬೇಕು. ಇದು ಕೇವಲ ಬಿಜೆಪಿಯ ಜವಾಬ್ದಾರಿ ಎಂದು ಸುಮ್ಮನಿದ್ದರೆ ಮುಂದೊಂದು ದಿನ ಎಲ್ಲರ ಮನೆ ಖಾಲಿ ಆಗುವ ಸ್ಥತಿ ಬರಬಹುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಜಿಲ್ಲೆಯ ಐದೂ ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದರು. ಕಳೆದ ಚುನಾವಣೆಯಲ್ಲಿ ಐದೂ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಬಿಜೆಪಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ಗೆ ಇರಲಿಲ್ಲ. ನಮ್ಮ ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನದಿಂದ ಸೋಲಾಗಿದೆ ಎಂದರು.
ಆಲ್ದೂರು ಮಂಡಲದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಗೆಲ್ಲಿಸುವ ಕೆಲಸ ಆಗಬೇಕು. ನಾಲ್ಕೂ ಶಕ್ತಿ ಕೇಂದ್ರದ ಅಧ್ಯಕ್ಷರು ಪದಾಧಿಕಾರಿಗಳ ಜವಾಬ್ದಾರಿ ಇದೆ ಎಂದರು.
ವಸ್ತಾರೆ ಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಪ್ರಸನ್ನ ಮಾತನಾಡಿ, ಪಕ್ಷದ ನಾಯಕರು ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಕೂದುವಳ್ಳಿ ಅರವಿಂದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮುರಡಪ್ಪ, ಆಲ್ದೂರು ಮಂಡಲಾಧ್ಯಕ್ಷ ರವಿಬಸರವಳ್ಳಿ, ಕೇಂದ್ರೀಯ ಕಾಫೀ ಮಂಡಳಿ ಸದಸ್ಯರಾದ ಜಿ.ಕೆ.ಕುಮಾರ್, ದೀಪಕ್ ದೋಡ್ಡಯ್ಯ, ಡಾ. ನರೇಂದ್ರ, ರವೀದ್ರಬೆಳವಾಡಿ, ಪುಣ್ಯಪಾಲ್, ಹೆಚ್.ಎಸ್.ಕವೀಶ್, ನಿರಂಜನ್ ಜಸಿಂತಾಅನಿಲ್ಕುಮಾರ್, ಸಂತೋಷ್ ಕೋಟ್ಯಾನ್, ದಿನೇಶ್ಮೂಗಳವಳ್ಳಿ, ಶಂಕರ್, ಕೃಷ್ಣಮೂರ್ತಿ ಮೈಲಿಮನೆ, ಮಂಜುಳಾಮಂಜುನಾಥ್, ವೀಣಾ, ಜ್ಯೋತಿಸುರೇಶ್, ಕಿಶನ್ ಸಂಪತ್ ಹೆಡದಾಳ್, ರವೀಂದ್ರ, ಶಶಿ, ನಾಗೇಶ್, ಕೃಷ್ಣ ಗುಣಿಗದ್ದೆ, ಭವಾನಿಶಂಕರ್, ಸಂಜಯ್, ನಾರಾಯಣಾಚಾರ್, ಹಿರಿಗಯ್ಯ, ಮಹೇಶ್ ಕೆರೆಮಕ್ಕಿ, ಅರುಣ್ ತಳಿಹಳ್ಳು, ಯೋಗೇಶ್, ನಾಗೇಶ್, ಉಮೇಶ್ ಉಪಸ್ಥಿತರಿದ್ದರು. ಸುಮಂತ್ ಸ್ವಾಗತಿಸಿದರು.
Inauguration ceremony of the new president and office bearers of Vastare Mahashakti Kendra