ಚಿಕ್ಕಮಗಳೂರು: ಸರ್ಕಾರದ ಯೋಜನೆಗಳಾದ ಸುಕನ್ಯಾ ಸಮೃದ್ಧಿ, ಮಾತೃ ವಂದನಾ ಯೋಜನೆಗಳ ಸೌಲಭ್ಯವನ್ನು ಅಲ್ಪಸಂಖ್ಯಾತರಿಗೆ ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಜುಲೈ-೨೦೨೪ ರಿಂದ ಸೆಪ್ಟೆಂಬರ್-೨೦೨೪ ರವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಹೆಣ್ಣು ಮಕ್ಕಳ ಯೋಗಕ್ಷೇಮವನ್ನು ಖಚಿತ ಪಡಿಸಲು ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೆರವಾಗಲು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಸೌಲಭ್ಯವನ್ನು ಅಲ್ಪಸಂಖ್ಯಾತರ ಮಕ್ಕಳು ಸಹ ಪಡೆಯಬೇಕು. ಅವರ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ತುಂಬಾ ಉಪಯುಕ್ತವಾದದ್ದು, ಅಧಿಕಾರಿಗಳು ಈ ಯೋಜನೆಗಳಿಗೆ ಸಂಬಂಧಪಟ್ಟ ಫಲಾನುಭವಿ ಮಕ್ಕಳ ಪೋಷಕರಿಗೆ ಅರ್ಜಿ ಸಲ್ಲಿಸುವಂತೆ ಅರಿವು ಮೂಡಿಸಿ ಕ್ರಮವಹಿಸಬೇಕು ಎಂದರು.
ಮಾತೃವಂದನಾ ಯೋಜನೆಯು ಅಲ್ಪಸಂಖ್ಯಾತರ ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗೆ ನೆರವಾಗುವುದೇ ಯೋಜನೆಯ ಉದ್ದೇಶವಾಗಿದೆ. ಪ್ರತಿ ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಸೌಲಭ್ಯ ದೊರೆಯುವಂತೆ ಜಾಗೃತೆವಹಿಸಬೇಕು. ಅಲ್ಪಸಂಖ್ಯಾತರ ಮಕ್ಕಳಿಗೆ ಕಡ್ಡಾಯವಾಗಿ ವಿದ್ಯಾರ್ಥಿವೇತನ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು.
ಶಾಲೆಯಿಂದ ಹೊರಬಂದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಅವರನ್ನು ಶಾಲೆಗೆ ದಾಖಲಾಗುವಂತೆ ಶಿಕ್ಷಕರು ನಿಗವಹಿಸಿಬೇಕು. ಶಾಲೆಗಳ ಕಟ್ಟಡಗಳ ನಿರ್ಮಾಣವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ದಾಖಲಾಗುವಂತೆ ಮತ್ತು ನಿಲಯಗಳ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಿ ಹೆಚ್ಚು ಮಕ್ಕಳು ನಿಲಯಗಳಲ್ಲಿ ದಾಖಲಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಬೇಗನೆ ವಸತಿಗಳ ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು. ಗೃಹಗಳ ನಿರ್ಮಾಣಕ್ಕೆ ಕಳಪೆ ಸಾಮಾಗ್ರಿಗಳನ್ನು ಬಳಸದೆ ಉತ್ತಮ ಕಾಮಗಾರಿಯನ್ನು ಮಾಡಿ ಪೂರ್ಣಗೊಳಿಸಿಬೇಕು. ಅಲ್ಪಸಂಖ್ಯಾತರ ಮಕ್ಕಳಿಗೆ ಟಿ ಡಿ ಲಸಿಕೆಗಳನ್ನು ನೀಡುವುದರ ಮೂಲ ಅವರ ಆರೋಗ್ಯದ ಬಗ್ಗೆ ಕಳಜಿ ವಹಿಸಬೇಕು. ಹೆಣ್ಣು ಮತ್ತು ಗಂಡಿನ ಜನನ ದರದ ಪಟ್ಟಿಯ ಮಾಹಿತಿಯನ್ನು ಆದಷ್ಟು ಬೇಗ ನೀಡಬೇಕು ಎಂದ ಅವರು ಅಲ್ಪಸಂಖ್ಯಾತರಿಗೆ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಿ ಅವರ ಅಭಿವೃದ್ಧಿಗೆ ಸಹಕರಿಸಬೇಕು.
ಅಲ್ಪಸಂಖ್ಯಾತರ ಇಲಾಖೆ ಉಪನಿರ್ದೇಶಕ ಬಲರಾಮ್ ಮಾತನಾಡಿ. ಜಿಲ್ಲೆಯಲ್ಲಿ ಇದುವರೆಗೆ ೫೭೨೫ ಅಲ್ಪಸಂಖ್ಯಾತರ ಮಕ್ಕಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ೧ ರಿಂದ ೦೮ ನೇ ತರಗತಿಯವರೆಗೆ ಮೆಟ್ರಿಕ್ ಪೂರ್ವ ರಾಜ್ಯ ವಿದ್ಯಾರ್ಥಿವೇತನಕ್ಕೆ ನವೆಂಬರ್ ೩೧ ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ನಿಗಧಿಪಡಿಸಲಾಗಿದೆ.
ಈಗಾಗಲೇ ವಸತಿ ಶಾಲೆಗಳ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಡಲಾಗುವುದು. ಐಟಿಐ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದ್ದು ಒಟ್ಟು ೪೭೮ ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಾರೆ. ಅಲ್ಪಸಂಖ್ಯಾತರಿಗೆ ಸ್ವಾವಲಂಬಿ ಸಾರಥಿ ಟ್ಯಾಕ್ಸಿ ಗೂಡ್ಸ್, ಆಟೋರಿಕ್ಷಾ ಖರೀದಿ ಸಹಾಯಧನ ಯೋಜನೆಯಡಿ ಫಲಾನುಭವಿಗೆ ಸಹಾಯಧನ ನೀಡಲಾಗಿದೆ.
ಶ್ರಮಶಕ್ತಿ ಸಾಲ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ ಹಾಗೂ ವಿಶೇಷ ಮಹಿಳಾ ಶ್ರಮಶಕ್ತಿ ಯೋಜನೆಗಳಡಿ ೨೦೨೩-೨೪ನೇ ಸಾಲಿನಲ್ಲಿ ಆನ್ಲೈನ್ ಮುಖಾಂತರ ಸ್ವೀಕೃತಗೊಂಡ ಅರ್ಜಿಗಳ ಪೈಕಿ ಸಂಬಂಧಪಟ್ಟ ಶಾಸಕರ ಆಯ್ಕೆ ಸಮಿತಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಾಕಿ ಉಳಿದ ಅರ್ಜಿದಾರರ ಪಟ್ಟಿಯನ್ನು ಸಂಬಂಧಪಟ್ಟ ಶಾಸಕರ ಆಯ್ಕೆ ಸಮಿತಿಗೆ ಕಳುಹಿಸಲಾಗಿದೆ. ಅರಿವು ಯೋಜನೆಯಡಿ ಆನ್ಲೈನ್ ಮುಖಾಂತರ ಸ್ವೀಕೃತಗೊಳ್ಳುವ ಅರ್ಜಿಗಳ ಆಧಾರದ ಮೇಲೆ ಭೌತಿಕ ಮತ್ತು ಆರ್ಥಿಕ ಗುರಿಯನ್ನು ನಿಗಧಿಪಡಿಸಲಾಗುವುದು ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹಾಂತೇಶ್ ಭಜಂತ್ರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Take steps to deliver government schemes to eligible beneficiaries