ಚಿಕ್ಕಮಗಳೂರು: ವೀರತನದ ಪ್ರತೀಕ ಒನಕೆ ಓಬವ್ವ, ಆಕೆಯ ಸಾಹಸಮಯ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕನ್ನಡ ನಾಡು ಅನೇಕ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟು ಹಲವಾರು ವೀರ ಸೈನಿಕರು, ವೀರ ವನಿತೆಯರನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿದೆ.
ಇವರ ಹೆಸರುಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿವೆ. ನಮ್ಮ ನಾಡಿನ ಐತಿಹಾಸಿಕ ಸ್ಥಳ ಚಿತ್ರದುರ್ಗ ಎಂದ ಕ್ಷಣ ನೆನಪಾಗುವುದೇ ಹೈದರಾಲಿಯ ಸೈನಿಕರೊಡನೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆ ಒನಕೆ ಒಬವ್ವನ ಹೆಸರು. ಅವರ ಶೂರತನದ ಜೀವನ ಕತೆಗಳು ಸದಾ ಚಿರಸ್ಮರಣೀಯವಾದುದು ಎಂದರು.
ಯಾವುದೇ ಯುದ್ಧ ಕಲೆಗಳು, ಶಸ್ತ್ರಾಭ್ಯಾಸಗಳನ್ನು ತಿಳಿಯದ ಸಾಮಾನ್ಯ ಮಹಿಳೆ ತನ್ನ ನಾಡಿನ ರಕ್ಷಣೆಗಾಗಿ ಏಕಾಂಗಿಯಾಗಿ ಕೋಟೆಗೆ ಆಕ್ರಮಣ ಮಾಡಿದ ನೂರಾರು ಎದುರಾಳಿ ಸೈನಿಕರನ್ನು ಕೇವಲ ಒನಕೆಯನ್ನು ಅಸ್ತ್ರವಾಗಿ ಮಾಡಿಕೊಂಡು ಅವರನ್ನು ಸೆದೆಬಡಿದು ದಾಳಿಯ ಗೆಲುವಿಗೆ ಕಾರಣಳಾದಳು. ದೇಶಪ್ರೇಮವಿರುವ ಪ್ರತಿಯೊಬ್ಬರಿಗೂ ದೇಶದ ರಕ್ಷಣೆ ವಿಚಾರ ಬಂದಾಗ ಧೈರ್ಯ ತಾನಾಗೆ ಚಿಮ್ಮುತ್ತದೆ ನಾಡು, ನುಡಿ, ದೇಶ ಪ್ರೇಮವನ್ನು ತಮ್ಮಲ್ಲಿ ಬೆಳಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ತಿಳಿಸಿದರು.
ತರೀಕೆರೆ, ಉಡೇವ ಸರ್ಕಾರಿ ಪ್ರೌಡ ಶಾಲೆ ಅಧ್ಯಾಪಕ ಎಂ.ಇ ರಮೇಶ್ ಉಪನ್ಯಾಸ ನೀಡಿ ಮಾತನಾಡಿ ಒನಕೆ ಓಬವ್ವಳ ಜೀವನ ಕಥೆ ಕೇಳುವ ಪ್ರತಿಯೊಬ್ಬರಲ್ಲು ದೇಶ ಪ್ರೇಮ ಮೂಡುತ್ತದೆ. ನಾಡಿನಲ್ಲಿ ಚಿತ್ರದುರ್ಗದ ಪಾಳೆಯಗಾರ ಮದಕರಿನಾಯಕನಿಗೂ ಹೈದರನಿಗೂ ನಡೆದ ಕಾಳಗ ಪ್ರಸಿದ್ಧವಾಗಿದೆ. ಹೈದರ್ ಈ ಅಭೇದ್ಯ ದುರ್ಗವನನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾಗದೆ ತನ್ನ ಶತ್ರುವನ್ನು ಭೇದೋಪಾಯದಿಂದಲೇ ಗೆಲ್ಲಬೇಕೆಂದು ಬಯಸಿ,
ಕೋಟೆಯ ಸುತ್ತಲೂ ಸುಳಿದಾಡುತ್ತಿರುವಾಗ ಕಳ್ಳಗಿಂಡಿಯನ್ನು ಪತ್ತೆ ಮಾಡಿ ಅದರಿಂದ ಕೋಟೆಯ ಒಳಗೆ ನುಸುಳಲು ಪ್ರಯತ್ನಿಸಿದ ಶತ್ರುಸೈನಿಕರನ್ನು ಹೊಂಚುಹಾಕಿ ಕೂಡಲೆ ಗುಡಿಸಲಿಗೆ ತೆರಳಿ ಒಂದು ಒನಕೆಯನ್ನು ತಂದು ಆ ಕಳ್ಳಗಿಂಡಿಯ ಬಳಿ ನಿಂತು ಅತ್ತ ಶತ್ರುಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುತ್ತಿದ್ದಂತೆ ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವಿ ಆಕೆಯ ಮುಂದೆ ಹೆಣದ ರಾಶಿಯೇ ಹಾಕಿದ್ದಳು. ಕೊನೆಗೆ ಶತ್ರುಗಳನ್ನು ಸೋಲಿಸಿ ವಿಜಯ ಸಾಧಿಸಿದರು ಇದರಲ್ಲಿ ವಿಜಯದ ಸಿಂಹ ಪಾಲು ಒಬವ್ವಳದೇ ಆಗಿದ್ದರಿಂದ ಕಾವಲುಗಾರನ ಹೆಂಡತಿಯಾದ ಓಬವ್ವಳ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆ ಓಬವ್ವನ ಕಿಂಡಿ ಎಂಬ ಹೆಸರು ಇಂದಿಗೂ ಪ್ರಸಿದ್ಧಿಯಾಗಿದೆ ಎಂದು ಹೇಳಿದರು
ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಮ್ಮ ನಾಡಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹಾಗೂ ಒನಕೆ ಒಬವ್ವರಂತಹ ವೀರ ಮಹಿಳೆಯರು ಜನಿಸಿರುವುದು ನಾಡಿನ ಹೆಮ್ಮೆ ಇವರ ಜೀವನ ಕತೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾದುದು ಎಂದ ಅವರು ನಮ್ಮ ಮಕ್ಕಳಲ್ಲಿ ಇಂತಹ ವೀರ ವನಿತೆಯರ ಸಾಧನೆಗಳನ್ನು ತಿಳಿಸಿ ದೇಶ ಪ್ರೇಮವನ್ನು ಮೂಡಿಸಿ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಬೀಜವನ್ನು ಬಿತ್ತಿ ಉತ್ತಮ ಪ್ರಜೆಗಳಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಚಿಕ್ಕಮಗಳೂರು ತಾಲ್ಲೂಕು ಗ್ರೇಡ್೨ ತಹಶೀಲ್ದಾರ್ ರಾಮ್ರಾವ್ ದೇಸಾಯಿ, ಜಿಲ್ಲಾ ಛಲವಾದಿ ಮಹಾಸಭಾ ಸಂಘದ ಅಧ್ಯಕ್ಷ ರಘು, ಜಿಲ್ಲಾ ಛಲವಾದಿ ಮಹಾಸಭಾ ಸಂಘದ ಗೌರವಾಧ್ಯಕ್ಷ ಮಲ್ಲೇಶ್ ಸ್ವಾಮಿ, ಛಲವಾದಿ ಮಹಾಸಭಾ ಸಂಘದ ನಗರಾಧ್ಯಕ್ಷ ವೆಂಕಟೇಶ್ ಮೂರ್ತಿ, ದಲಿತ ಸಂಘದ ಮುಖಂಡ ರಾಧಕೃಷ್ಣ ಸೇರಿದಂತೆ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ತಿತರಿದ್ದರು
Onakeobawwa the epitome of heroism