ಚಿಕ್ಕಮಗಳೂರು: ಭಗವಾನ್ ಶ್ರೀ ಬಿರ್ಸಾ ಮುಂಡಾರವರ ೧೫೦ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇದೇ ನವೆಂಬರ್ ೧೫ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಹನೀಯರ ಜಯಂತಿ ಕಾರ್ಯಕ್ರಮಗಳು ಜಾತಿಗೆ ಸೀಮಿತಗೊಳಿಸದೆ ಸಮಾಜದ ಎಲ್ಲಾ ಜನರಿಗೆ ಅವರ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದ ಅವರು ಬಿರ್ಸಾ ಮುಂಡಾ ಜಯಂತಿ ಸಮಾರಂಭದಲ್ಲಿ ಸರ್ಕಾರ ನಿಯಾಮನುಸಾರ ಆಹ್ವಾನ ಪತ್ರಿಕೆ, ಗಣ್ಯರು ಮತ್ತು ಉಪನ್ಯಾಸ ಮಾಡಲು ಸಿದ್ದತೆ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಭಗವಾನ್ ಬಿರ್ಸಾ ಮುಂಡಾ ಜಯಂತಿ ದಿನದಂದು ಪರಿಶಿಷ್ಟ ವರ್ಗದವರು ಹಾಗೂ ಆ ಸಮುದಾಯ ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಈ ಯೋಜನೆಯಡಿ ಜಿಲ್ಲೆಯ ಮೂರು ಗ್ರಾಮಗಳು ಆಯ್ಕೆಯಾಗಿವೆ ಎಂದ ಅವರು ಈ ಗ್ರಾಮಗಳಿಗೆ ಕೇಂದ್ರ ಸರ್ಕಾರ ೨೦.೩೯ ಲಕ್ಷ ರೂ.ಗಳು ಹಾಗೂ ೧೭ ಇಲಾಖೆಗಳ ವಿವಿಧ ಸೌಲಭ್ಯಗಳು ಸೇರಿ ಒಟ್ಟಾರೆ ಆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಡೆಯಲಿದೆ
ಪರಿಶಿಷ್ಟ ವರ್ಗದಲ್ಲಿ ಸಣ್ಣ ಸಣ್ಣ ಬುಡಕಟ್ಟು, ಜನಾಂಗದ ಎಲ್ಲಾ ಆದಿವಾಸಿಗಳಿಗೂ ಸರ್ಕಾರ ಸೌಲಭ್ಯಗಳನ್ನು ಸಿಗುವಂತೆ ಈ ಯೋಜನೆಯಲ್ಲಿ ಅವಕಾಶ ಮಾಡಿಕೊಳ್ಳುವಂತೆ ಯೋಜನೆ ರೂಪಿಸಬೇಕು. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಅರ್ಹವಾದ ಎಲ್ಲಾ ಸಮುದಾಯಕ್ಕೂ ಸರ್ಕಾರದ ಯೋಜನೆ ದೊರಕುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿರ್ಸಾ ಮುಂಡಾ ಜಯಂತಿಯನ್ನು ಎಲ್ಲಾ ಸಮುದಾಯದವರು ಸೇರಿಕೊಂಡು ಆಯಾ ಜನಾಂಗದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಕೆಲಸವನ್ನು ಕೂಡ ಮಾಡಲಾಗುವುದು ಎಂದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ, ಭಾಗೀರಥಿ ಕಾರ್ಯಕ್ರಮದ ವಿವರ ತಿಳಿಸಿ ಸ್ವಾಗತಿಸಿದರು.
ಸಭೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್, ವಿವಿಧ ಸಮಾಜದ ಮುಖಂಡರುಗಳು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Birth Anniversary of Lord Sri Birsa Munda