ಚಿಕ್ಕಮಗಳೂರು: ಸರ್ಕಾರದ ಸೌಲಭ್ಯಗಳು ಸಾಮಾನ್ಯ ಬಡ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಲಕ್ಯಾ ಹೋಬಳಿ ಹಿರೇಗೌಜದಲ್ಲಿ ಜಿ.ಪಂ, ತಾ.ಪಂ ಸಹಯೋಗದಲ್ಲಿ ಹಿರೇಗೌಜ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಜನರ ಸಮಸ್ಯೆ ಬಗೆಹರಿಸಲು ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಆದೇಶದನ್ವಯ ಗ್ರಾ.ಪಂ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಬಡ ಜನರ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲು ಸಹಕಾರಿಯಾಗಿದೆ ಎಂದ ಅವರು, ಈ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಅಧಿಕಾರಿಗಳನ್ನು ಜನರ ಮನೆಬಾಗಿಲಿಗೆ ಕರೆದುಕೊಂಡು ಹೋಗಿ ಸಮಸ್ಯೆ ಆಲಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಗೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆಂದು ಹೇಳಿದರು.
ಗ್ರಾಮಗಳಲ್ಲಿ ನಾಗರೀಕರಿಗೆ ವಿವಿಧ ಬಗೆಯ ತೊಂದರೆಗಳನ್ನು ನಿವಾರಿಸುವ ಸಲುವಾಗಿ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಗ್ರಾ.ಪಂಗೆ ಅಲೆಯಬಾರದೆಂಬ ದೃಷ್ಟಿಯಿಂದ ಜನಸಂಪರ್ಕ ಸಭೆಗಳನ್ನು ಏರ್ಪಡಿಸುವ ಮೂಲಕ ಬಡ ಜನರಿಗೆ ನೆರವಾಗುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾಮಟ್ಟದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಸಮಸ್ಯೆ, ತೋಟಗಾರಿಕೆ, ಕಂದಾಯ, ಆರೋಗ್ಯ, ವಿದ್ಯುತ್, ಆಹಾರ ಇಲಾಖೆ ಸೇರಿದಂತೆ ಮುಂತಾದ ಯಾವುದೇ ಸಮಸ್ಯೆಗಳಿದ್ದರೆ ಈ ಜನಸಂಪರ್ಕ ಸಭೆಯಲ್ಲೇ ಪರಿಹರಿಸಲಾಗುವುದೆಂದು ಹೇಳಿದರು.
ಹಿರೇಗೌಜ ಗ್ರಾ.ಪಂಗೆ ೧.೧೩ ಕೋಟಿ ಅನುದಾನವನ್ನು ನೀಡಲಾಗಿದ್ದು, ಕುರಿಚಿಕ್ಕನಹಳ್ಳಿ ರಸ್ತೆ ಅಭಿವೃದ್ಧಿಗೆ ೨೦ ಲಕ್ಷ ರೂ, ಚಿಕ್ಕಗೌಜ-ಹಿರೇಗೌಜ ಕಾಂಕ್ರೀಟ್ ರಸ್ತೆಗೆ ೬೦ ಲಕ್ಷ ರೂ, ಕರಿಸಿದ್ದನಹಳ್ಳಿ ರಸ್ತೆಗೆ ೧೦ ಲಕ್ಷ ರೂ, ಕೆಂಗೇನಹಳ್ಳಿ ೧೦ ಲಕ್ಷ ರೂ, ಸಾದರಹಳ್ಳಿ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ದುರಸ್ಥಿಗೆ ೨ ಲಕ್ಷ ರೂ, ಹಿರೇಗೌಜ ಗ್ರಾಮದ ಗ್ರಂಥಾಲಯ ಒಳಾಂಗಣ ನವೀಕರಣಕ್ಕೆ ೧.೫೦ ಲಕ್ಷ ರೂ, ಕಾರೇಹಳ್ಳಿ ರಸ್ತೆಗೆ ೧೦ ಲಕ್ಷ ರೂ, ವಿಎಸ್ಎಸ್ಎನ್ ಗೆ ೩ ಲಕ್ಷ ರೂ ಹೀಗೆ ಅನುದಾನವನ್ನು ನೀಡಿದ್ದು, ತಾಲ್ಲೂಕಿನ ೩೪ ಗ್ರಾಮ ಪಂಚಾಯಿತಿಗಳ ಪೈಕಿ ಅತೀ ಹೆಚ್ಚು ಅನುದಾನ ಪಡೆದ ಹಿರೇಗೌಜ ಗ್ರಾಮ ಪಂಚಾಯಿತಿ ಎಂದು ಹೇಳಿದರು. ಈ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿಗಳು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಮಂಜುಳ ವಹಿಸಿದ್ದರು. ಕೃಷಿ ಉತ್ಪನ್ನಗಳ ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಜಿ.ಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ, ಸದಸ್ಯರಾದ ಶಿವಕುಮಾರ್, ಗುರುಮೂರ್ತಿ, ಹಾಲಪ್ಪ, ಸುರೇಶ್, ಬೀರೇಗೌಡ, ವಿಜಯ್ಕುಮಾರ್, ಶೋಭಾರಾಣಿ, ವಿಶಾಲಾಕ್ಷಿ, ಚಂದ್ರಕಲಾ, ನಾಗಣ್ಣ, ಪಿಡಿಓ ರಾಜ್ಕುಮಾರ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Public relations meeting held at Hiregauja Gram Panchayat