ಚಿಕ್ಕಮಗಳೂರು: ೨೦೨೪-೨೫ ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್ಎಕ್ಯೂ ಗುಣಮಟ್ಟದ ರಾಗಿ, ಭತ್ತ ಖರೀದಿಸಲು ಬೆಂಬಲ ಬೆಲೆ ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ, ಭತ್ತ ಖರೀದಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಾಮಾನ್ಯ ಭತ್ತ ಕ್ವಿಂಟಾಲ್ಗೆ ರೂ. ೨,೩೦೦, ಭತ್ತ ಗ್ರೇಡ್-ಎ ರೂ. ೨,೩೨೦ ರಂತೆ ಹಾಗೂ ರಾಗಿ ಕ್ವಿಂಟಾಲ್ಗೆ ರೂ. ೪,೨೯೦ ರಂತೆ ಖರೀದಿಸಲಾಗುವುದು. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ವಹಿಸಬೇಕು. ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ ಎಂದರು.
ಸೂಕ್ತ ದಾಸ್ತಾನಿಗಾಗಿ ಭತ್ತ, ರಾಗಿ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತ, ರಾಗಿಯನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ಸೂಚಿಸಿದ ಅವರು ಖರೀದಿ ನೋಂದಣಿ ಪ್ರಾರಂಭವಾಗುವ ದಿನಾಂಕ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೋಂದಣಿ ಕೇಂದ್ರಗಳು ಹಾಗೂ ಭತ್ತ, ರಾಗಿ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡಬೇಕು ಎಂದು ಹೇಳಿದರು.
ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ಬೆಳೆ ಮಾಹಿತಿಯನ್ನು ನೇರವಾಗಿ ಪಡೆದು ನೋಂದಾಯಿಸಿಕೊಳ್ಳಬೇಕು. ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯ ಅನುಸಾರ ಜಿಲ್ಲೆಯ ತರೀಕೆರೆ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕು ಎಪಿಎಂಸಿ ಯಾರ್ಡ್ಗಳಲ್ಲಿ ಭತ್ತ ಖರೀದಿ ಕೇಂದ್ರವನ್ನು ಹಾಗೂ ಚಿಕ್ಕಮಗಳೂರು, ಕಡೂರು, ಬೀರೂರು, ಪಂಚನಹಳ್ಳಿ, ತರೀಕೆರೆ, ಅಜ್ಜಂಪುರ ಎಪಿಎಂಸಿ ಯಾರ್ಡ್ಗಳಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು, ಖರೀದಿ ಕೇಂದ್ರಗಳಲ್ಲಿ ಡಿಸೆಂಬರ್ ೦೧ ರಿಂದ ರೈತರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ನೊಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯ ನೊಂದಾಯಿತ ರೈತರಿಂದ ರಾಗಿ ಹಾಗೂ ಭತ್ತವನ್ನು ೨೦೨೫ ಜನವರಿ ೦೧ ರಿಂದ ಮಾರ್ಚ್ ೩೧ ರವರೆಗೂ ಸರ್ಕಾರ ನಿಗದಿಗೊಳಿಸಿದ ಮಾನದಂಡಗಳಿಗೆ ಅನುಗುಣವಾಗಿ ಖರೀದಿಸಲಾಗುವುದು. ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವುದರ ಜೊತೆಗೆ ಖರೀದಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಸಿಸಿ ಕ್ಯಾಮರಗಳನ್ನು ಅಳವಡಿಸಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿ ರೈತರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು ಅಗತ್ಯ ಸಿಬ್ಬಂದಿ, ಬಯೋಮೆಟ್ರಿಕ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಸರ್ಕಾರ ನೀಡಿರುವ ಗುರಿಯನ್ನು ಮೀರದಂತೆ ನಿಗಧಿಪಡಿಸಲಾಗಿದೆ. ಬೇಡಿಕೆ ಇದ್ದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು, ರಾಗಿ ಹಾಗೂ ಭತ್ತ ಸರಬರಾಜು ಮಾಡಿದ ರೈತರಿಗೆ ನಿಗಧಿತ ಅವಧಿಯೊಳಗೆ ಡಿ ಬಿ ಟಿ ಮೂಲಕ ಹಣ ಜಮೆ ಮಾಡುವಂತೆ ಕ್ರಮವಹಿಸಬೇಕು. ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಒಳ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿಕೊಂಡು ರೈತರಿಂದ ಭತ್ತ, ರಾಗಿ ಖರೀದಿಸಬೇಕು.
ರೈತರು ರಾಗಿ ಹಾಗೂ ಭತ್ತವನ್ನು ಸರ್ಕಾರದ ವತಿಯಿಂದ ತೆರೆಯಲ್ಪಟ್ಟ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡುವ ಮೂಲಕ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ಗೊಂದಲಗಳಿದ್ದಲ್ಲಿ ಆಹಾರ ಇಲಾಖೆ ದೂ.ಸಂ. ೦೮೨೬೨-೨೩೭೭೧೫, ಕೃಷಿ ಇಲಾಖೆ ದೂ.ಸಂ.೦೮೨೬೨-೨೨೦೫೨೬ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ದೂ.ಸಂ.೦೮೨೬೨-೨೯೫೬೨೩ನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಕೆಎಫ್ಸಿಎಸ್ಸಿ ಹಾಗೂ ಜಿಲ್ಲೆಯ ಎಲ್ಲಾ ಎಪಿಎಂಸಿ ಕಾರ್ಯದರ್ಶಿಗಳು ಅಧಿಕಾರಿಗಳು ಭಾಗವಹಿಸಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ, ಸುಬ್ರಹ್ಮಣ್ಯ ಸಭೆಗೆ ಮಾಹಿತಿ ನೀಡಿದರು.
A preliminary meeting was held at the District Collector’s office hall regarding the purchase of millet and paddy