ಚಿಕ್ಕಮಗಳೂರು : ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಂಬಂಧ ಹತ್ತು ಹಲವು ಮಾಹಿತಿಗಳು ಹರಿದಾಡುತ್ತಿವೆ. ಧರ್ಮಸ್ಥಳದಲ್ಲಿ ಬಂಧಿತ ಇಬ್ಬರು ನಕ್ಸಲ್ ಸಿಂಪಥೈಸರ್ ಓಡಾಟ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿಗೆ ಕೇರಳ ನಕ್ಸಲರು ಬರೆದ ಪತ್ರ ತರಲು ಹೊರಟಿದ್ದ ಬಗ್ಗೆ ಪೊಲೀಸರಿಗೆ ಗುಮಾನಿ ಇದ್ದು ಅದರ ಜಾಡು ಹಿಡಿದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಪಶ್ಚಿಮ ವಲಯ ಐಜಿಪಿ ಖುದ್ದು ಶೃಂಗೇರಿ ಯಲ್ಲಿ ಮೊಕ್ಕಾಂ ಹೂಡಿದ್ದು ವಿಚಾರಣೆ ನೇತೃತ್ವ ವಹಿಸಿದ್ದಾರೆ.
ಪಶ್ಚಿಮ ಘಟ್ಟಗಳ ಕಾನನದಲ್ಲಿ ಕೆಂಪು ಉಗ್ರರ ಓಡಾಟದ ವದಂತಿಗೆ ಹಲವು ಮಾಹಿತಿಗಳು ಇದೀಗ ಹೊರ ಬೀಳುತ್ತಿವೆ. ನಕ್ಸಲರಿಗೆ ಬೆನ್ನೆಲುಬಾಗಿ ಇದ್ದ ಕೆಲ ಮಲೆನಾಡಿನ ನಕ್ಸಲ್ ಅನುಕಂಪಿತರು ಮಾಡಿದ ಯಡವಟ್ಟು ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ. ಕೇರಳದ ನಕ್ಸಲರು ಬರೆದ ಪತ್ರ ತರಲು ಬೆಂಗಳೂರಿಗೆ ಹೋಗಿ ಗುಟ್ಟು ಬಿಟ್ಟುಕೊಟ್ರಾ ನಕ್ಸಲ್ ಬೆಂಬಲಿಗರು ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಆ ಪತ್ರವನ್ನು ತರಲು ಹೋಗಿದ್ದರು ಇಬ್ಬರು ಯುವಕರು ಎಂದು ಗೊತ್ತಾಗಿದೆ.
ಅದು ಹಾರ್ಡ್ ಕೋರ್ ನಕ್ಸಲ್ ನಾಯಕಿಗೆ ಸೇರಿದ ಪತ್ರ ಎಂಬ ಅನುಮಾನ ಕೂಡಾ ಮನೆ ಮಾಡಿದೆ. ಪತ್ರ ತರಲು ಬೆಂಗಳೂರಿಗೆ ಹೋಗಿದ್ದ ಇಬ್ಬರು ಯುವಕರು ಲಾಕ್ ಆದ ನಂತರ ಆ ಇಬ್ಬರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೋ ಪೊಲೀಸರು ಮತ್ತಷ್ಟು ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ವೆಸ್ಟರ್ನ್ ಘಾಟ್ ನಲ್ಲಿ ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ ಕಾರ್ಯ ನಡೆಸುತ್ತಿದೆ. ಇತ್ತೀಚೆಗೆ ಈದು ಎಂಬ ಗ್ರಾಮಕ್ಕೆ 6 ಜನ ನಕ್ಸಲರು ಮನೆಯೊಂದಕ್ಕೆ ಭೇಟಿ ನೀಡಿದ್ದರು ಮನೆಯವರ ಜೊತೆ ಮಾತನಾಡಿ ಊಟ ಮಾಡಿಕೊಂಡಿ ಹೋಗಿದ್ದ ಬಗ್ಗೆ ಸಂಶಯ ಕೂಡಾ ಇತ್ತು.
ಸದ್ಯ ಕೊಪ್ಪ-ಶೃಂಗೇರಿ-ಕಳಸ ತಾಲೂಕಿನ ಕಾಡು-ಕಾಡಂಚಿನಲ್ಲಿ ತೀವ್ರ ಶೋಧ ನಡೆಯುತ್ತಿದ್ದು ಡಾಗ್ ಸ್ಕ್ವಾಡ್ ನೊಂದಿಗೆ ಮಲೆನಾಡಲ್ಲಿ ಎ.ಎನ್.ಎಫ್ ಹೈ ಅಲರ್ಟ್ ಆಗಿದೆ. ಈ ನಡುವೆ ಶೃಂಗೇರಿಯಲ್ಲಿ ಬೀಡು ಬಿಟ್ಟಿರುವ ಎ.ಎನ್.ಎಫ್. ಎಸ್ಪಿ, ಚಿಕ್ಕಮಗಳೂರು ಎಸ್ಪಿ ಹಾಗೂ ಪಶ್ಚಿಮ ವಲಯ ಐಜಿಪಿ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಳೆದ ಒಂದು ವಾರದಿಂದ ರೂಮರ್ ಗಳೇ ಹರಿದಾಡುತ್ತಿದ್ದ ನಕ್ಸಲರ ಚಟುವಟಿಕೆ ಕೊನೆಗೂ ದೃಢಪಟ್ಟಿದೆ. ಅಲ್ಲಿ ಬಂದರು ಇಲ್ಲಿ ಹೋದರು ಎಂಬೆಲ್ಲಾ ಊಹಾಪೋಹಗಳಿಗೆ ಕಡೆಗೂ ಖಾತ್ರಿ ದೊರೆತಿದೆ. ಮುಂಡಗಾರು ಲತಾ ಟೀಮ್ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಗ್ರಾಮವೊಂದರ ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋಗಿರುವುದು ಖಚಿತಗೊಂಡಿದೆ.
ಮಲೆನಾಡಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದೆ ಶೃಂಗೇರಿ ಸುತ್ತಮುತ್ತಲಿನ ಹಳ್ಳಿಗಳಿಗೆ ಬಂದು ಜನರನ್ನ ಹೆಸರಿಸಲು ನಕ್ಸಲರು ಮುಂದಾಗಿದ್ದಾರೆ. ಹಾರ್ಡ್ ಕೋರ್ ನಕ್ಸಲ್ ಮುಂಡಗಾರು ಲತಾ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಯುಎ.ಪಿಎ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ ಎ.ಎನ್.ಎಫ್. ಡಿವೈಎಸ್ಪಿ ದೂರಿನ ಹಿನ್ನೆಲೆ ಎಫ್ಐಆರ್ ಆಗಿದ್ದು ಮುಂಡಗಾರು ಲತಾ, ಜಯಣ್ಣ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ,
ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋದ ಮುಂಡಗಾರು ಲತಾ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗುತ್ತಿದ್ದಂತೆ ಸ್ಥಳದಿಂದ ನಕ್ಸಲರು ನಾಪತ್ತೆಯಾಗಿದ್ದಾರೆ ಈ ವೇಳೆ ಸ್ಥಳದಲ್ಲಿ 3 ಗನ್ ಹಾಗೂ ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡ ನಕ್ಸಲರಿಗಾಗಿ ಸ್ಥಳಿಯ ಪೊಲೀಸರ ಜೊತೆ ಎ.ಎನ್.ಎಫ್. ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ.
Naxal activity again in the district – FIR against Mundagaru Lata team