ಚಿಕ್ಕಮಗಳೂರು: ಜನಸಂಪರ್ಕ ಸಭೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಲು ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಅವರು ಇಂದು ನಗರಸಭೆಯಿಂದ ವಾರ್ಡ್ ನಂ-೨೬, ೨೭ ರಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಗೆ ಚಾಲನೆ ನೀಡಿ ಮಾತನಾಡಿ ನಗರಸಭೆ ಆಯೋಜಿಸಿರುವ ಈ ಜನಸಂಪರ್ಕ ಸಭೆಯನ್ನು ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವ ಮೂಲಕ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸಿ ಇತ್ಯರ್ಥಪಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಜನಸಂಪರ್ಕ ಸಭೆಯಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ, ಮೆಸ್ಕಾಂ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ವ್ಯಾಪ್ತಿಗೆ ಬರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಆಗಮಿಸಿದ್ದು, ನಾಗರೀಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗಿದೆ ಎಂದರು.
ಸರ್ಕಾರ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ವಾರ್ಷಿಕ ೫೯ ಸಾವಿರ ಕೋಟಿ ರೂ ವ್ಯಯ ಮಾಡುತ್ತಿದೆ. ಈ ಮಧ್ಯೆ ಸಮಾಜದ ಕೆಲವು ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ದೇವಸ್ಥಾನ, ಸಮುದಾಯ ಭವನ, ರಸ್ತೆ ದುರಸ್ಥಿಗೆ ಅನುದಾನ ನೀಡಲು ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಸರ್ಕಾರದ ಅನುದಾನದ ಜೊತೆಗೆ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಬಳಸಿಕೊಂಡು ಚರಂಡಿ, ರಸ್ತೆ ದುರಸ್ಥಿ ಮಾಡಬೇಕು, ಜೊತೆಗೆ ನಾಗರೀಕರ ಮೂಲ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಸ್ವಚ್ಚತೆ ಮುಂತಾದವುಗಳಿಗೆ ಸ್ಪಂದಿಸಲು ಜನಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದರು.
ಸೋಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ೨೦ ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿದ್ದು, ಇಂದು ಪೂಜೆ ಸಲ್ಲಿಸಲಾಗಿದೆ. ಸಮುದಾಯ ಭವನ ಮುಂದುವರೆದ ಕಾಮಗಾರಿಗೆ ೧೦ ಲಕ್ಷ ರೂ ಮಂಜೂರು ಮಾಡಲಾಗಿದ್ದು, ಸಧ್ಯದಲ್ಲೇ ಕಾಮಗಾರಿ ಆರಂಭವಾಗುವುದಾಗಿ ಭರವಸೆ ನೀಡಿದರು.
ಈ ಸಮುದಾಯದ ಸದುಪಯೋಗವನ್ನು ವಾರ್ಡಿನ ಜನತೆ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಇದೇ ಸಮುದಾಯ ಭವನಕ್ಕೆ ಹಿಂದೆ ನಗರೋತ್ಥಾನದಿಂದ ೩೦ ಲಕ್ಷ ರೂ ಮೀಸಲಿಟ್ಟಿದ್ದು, ಟೆಂಡರ್ ಕರೆಯಲಾಗಿತ್ತು. ಆದರೆ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಒಟ್ಟು ನಗರೋತ್ಥಾನದಡಿ ೪ ಕೋಟಿ ರೂ ವೆಚ್ಚದಲ್ಲಿ ನಗರದ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ ಎಂದು ವಿವರಿಸಿದರು.
ನಗರದಲ್ಲಿರುವ ಸಮುದಾಯ ಭವನಗಳನ್ನು ನಗರೋತ್ಥಾನದಡಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದ್ದು, ಸಧ್ಯದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಣೆ ಮಾಡುತ್ತೇವೆ ಎಂದು ಹೇಳಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಗರದಲ್ಲಿ ಯುಜಿಡಿ ಮತ್ತು ಅಮೃತ್ ಯೋಜನೆಯ ಕುಡಿಯುವ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ವೀಕ್ಷಣೆ ಮಾಡಿ ಚಾನಲ್ ಸ್ವಚ್ಚತೆಗೊಳಿಸಲು ಕ್ರಮ ವಹಿಸಬೇಕೆಂದು ಹೇಳಿದರು.
ಈಗಾಗಲೇ ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ವಾರ್ಡಿನ ನಾಗರೀಕರು ಕಸವನ್ನು ಗಂಟೆ ಗಾಡಿಗೆ ಹಾಕುವ ಮೂಲಕ ಸ್ವಚ್ಚತೆ ಕಾಪಾಡಲು ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ನಗರಸಭೆ ಸದಸ್ಯ ಟಿ.ರಾಜಶೇಖರ್ ಮಾತನಾಡಿ, ಯುಜಿಡಿ ಅಮೃತ್ ಯೋಜನೆ, ಎಂಐ ಚಾನಲ್ ಈ ಮೂರು ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಎಂದು ಹೇಳಿದ ಅವರು ದೀಪದ ಕೆಳಗೆ ಕತ್ತಲು ಎಂಬಂತೆ ಕೆಲವು ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸರಬರಾಜು ಕಡಿಮೆಯಾಗಿದೆ. ಈ ಸಂಬಂಧ ನಾಗರೀಕರು ದಿನನಿತ್ಯ ನನ್ನ ಗಮನಕ್ಕೆ ತರುತ್ತಿದ್ದಾರೆ ಎಂದರು.
ಸಮುದಾಯ ಭವನ ಅಭಿವೃದ್ಧಿಗೆ ಶ್ರಮಿಸಿದ್ದು, ಶಾಸಕರು ೧೦ ಲಕ್ಷ ರೂ ಅನುದಾನ ನೀಡುವ ಮೂಲಕ ಅಭಿವೃದ್ಧಿಯಾದರೆ ನಾಗರೀಕರಿಗೆ ಅನುಕೂಲವಾಗಲಿದೆ. ನಗರಸಭೆ ಅಧಿಕಾರಿಗಳು ವಾರ್ಡ್ ವಿಂಗಡಣೆ ಮಾಡುವಾಗ ಗೊಂದಲ ಉಂಟುಮಾಡದೆ ಸರ್ವೆ ನಕಾಶೆ ಆದರಿಸಿ ಮಾಡಬೇಕು. ಇದರಿಂದ ೨೭ನೇ ವಾರ್ಡಿನ ಮತದಾರರು ೨೬ಕ್ಕೆ ಸೇರ್ಪಡೆಯಾಗಿದ್ದಾರೆಂದು ವಿಷಾಧಿಸಿದರು.
ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ತಮ್ಮ ಕಳೆದ ೩೦ ತಿಂಗಳ ಆಡಳಿತಾವಧಿಯಲ್ಲಿ ಈ ವಾರ್ಡಿನ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ವಾರ್ಡಿನ ಎಲ್ಲಾ ರಸ್ತೆಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಡಾಂಬರೀಕರಣ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯ ಶಾದಬ್ ಆಲಂಖಾನ್, ಅರುಣ್ ಕುಮಾರ್, ಮುನೀರ್ ಅಹ್ಮದ್, ಲಕ್ಷ್ಮಣ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಪೌರಾಯುಕ್ತ ಬಿ.ಸಿ. ಬಸವರಾಜ್ ಸ್ವಾಗತಿಸಿದರು.
Public relations meeting organized in Ward No-26-27