ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಮಾಲೆ ಮತ್ತು ದತ್ತ ಜಯಂತಿಯನ್ನು ಡಿ.೬ ರಿಂದ ೧೪ ರವರೆಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರೀ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ದತ್ತಮಾಲೆ ಮತ್ತು ದತ್ತಜಯಂತಿ ಡಿಸೆಂಬರ್ ೬ರಿಂದ ೧೪ರವರೆಗೆ ನಡೆಯಲಿದ್ದು, ದತ್ತಜಯಂತಿ ಹಿಂದೂ ಸಮಾಜದ ಉತ್ಸವ, ಶ್ರದ್ಧಾಕೇಂದ್ರವಾಗಬೇಕೆಂದು ಪ್ರತಿಪಾಧಿಸಿದ ಅವರು, ದತ್ತಪೀಠ ಕೇವಲ ಪ್ರವಾಸ ತಾಣವಲ್ಲ. ತೀರ್ಥಕ್ಷೇತ್ರವೆಂದು ತಿಳಿಸಿದರು.
ದತ್ತಪೀಠದಲ್ಲಿ ಡಿ.೧೨ ರಂದು ಅನಸೂಯದೇವಿ ಪೂಜೆ ನಡೆಯಲಿದೆ. ಗಣಪತಿಪೂಜೆ, ಪುಣ್ಯಾಹವಾಚನ, ಪಂಚಗವ್ಯಶುದ್ಧಿ, ಋತ್ವಿಗ್ವರ್ಣ, ಗಣಹೋಮ, ನವಗ್ರಹಹೋಮ, ದುರ್ಗಾಹೋಮ, ಚಂಡಿಕಾ ಪಾರಾಯಣ ಕಲಾಶಾಭಿಷೇಕ, ಹಾಗೂ ಮಹಾಪೂಜೆ ನಡೆಯಲಿದ್ದು, ಸಂಜೆ ಪಾದುಕಾಶುದ್ಧಿ, ಪ್ರಾಕಾರಶುದ್ಧಿ, ವಾಸ್ತುರಕ್ಷೆಘ್ನಹೋಮ, ಸುದರ್ಶನಹೋಮ, ದುರ್ಗಾದೀಪ ನಮಸ್ಕಾರ ಕಲಶಾಭಿಷೇಕ, ಮಹಾಪೂಜೆನಡೆಯಲಿದೆಎಂದರು.
ಅನಸೂಯದೇವಿ ಪೂಜೆ ಅಂಗವಾಗಿ ಡಿಸೆಂಬರ್ ೧೨ ರಂದು ಬೆಳಿಗ್ಗೆ ೯.೩೦ಕ್ಕೆ ಮಹಿಳೆಯರಿಂದ ನಗರದಲ್ಲಿ ಸಂಕೀರ್ತನಾಯಾತ್ರೆ ನಡೆಯಲಿದೆ. ಬೋಳರಾಮೇಶ್ವರ ದೇವಾಲಯ ಆವರಣದಿಂದ ಆರಂಭಗೊಳ್ಳುವ ಯಾತ್ರೆ ಐ.ಜಿ.ರಸ್ತೆಯಲ್ಲಿ ಸಾಗಿ ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಮುಕ್ತಾಯಗೊಳ್ಳುವುದು, ಬಳಿಕ ಮಹಿಳೆಯರು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳುವರೆಂದು ಮಾಹಿತಿ ನೀಡಿದರು.
ನಗರದಲ್ಲಿ ಡಿಸೆಂಬರ್ ೧೩ ರಂದು ಬೃಹತ್ ಶೋಭಾಯಾತ್ರೆ ನಡೆಯುವುದು. ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯ ಆವರಣದಿಂದ ಆರಂಭಗೊಳ್ಳುವ ಯಾತ್ರೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ, ಹನುಮಂತಪ್ಪವೃತ್ತ ಬಳಸಿಕೊಂಡು, ಎಂ.ಜಿ.ರಸ್ತೆಯಲ್ಲಿ ತೆರಳಿ ಆಜಾದ್ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿ ಸಂಜೆ ೬ ಗಂಟೆಗೆ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಳ್ಳುವರು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ಪೈ ಅಧ್ಯಕ್ಷತೆ ವಹಿಸುವರು. ದಕ್ಷಿಣ ಕರ್ನಾಟಕದ ಬರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡುವರೆಂದರು.
ದತ್ತಪೀಠದಲ್ಲಿ ಡಿಸೆಂಬರ್ ೧೪ ರಂದು ದತ್ತಜಯಂತಿ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ೩೦ ಸಾವಿರಕ್ಕೂ ಹೆಚ್ಚು ದತ್ತಭಕ್ತರು ಆಗಮಿಸಲಿದ್ದಾರೆ. ಪೀಠದ ಮೇಲ್ಭಾಗದಲ್ಲಿ ರುದ್ರಹೋಮ, ದತ್ತಾತ್ರೇಯಮಹಾಮಂತ್ರ, ಮಹಾಯಾಗ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನವಿದೆ. ಬಳಿಕ ಪ್ರಸಾದವಿನಿಯೋಗ ನಡೆಯುತ್ತಿದ್ದು, ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಎಲ್ಲಾ ಸೌಲಭ್ಯಮಾಡಿಕೊಡುವಂತೆ ಒತ್ತಾಯಿಸಿದರು.
ಹುಣ್ಣಿಮೆಪೂಜೆ:ಇದುವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರು ಹುಣ್ಣಿಮೆ ದಿನ ದತ್ತಪೀಠಕ್ಕೆ ತೆರಳಿ ಹುಣ್ಣಿಮೆ ಪೂಜೆ ನೆರವೇರಿಸುತ್ತಿದ್ದರು. ಈ ವರ್ಷದಿಂದ ಇದು ಪ್ರಾಂತ ಕಾರ್ಯಕ್ರಮವಾಗಿದೆ. ೨-೩ ಜಿಲ್ಲೆಯಿಂದ ಮುಖಂಡರು ಮತ್ತು ಕಾರ್ಯಕರ್ತರು ಪೀಠಕ್ಕೆ ಆಗಮಿಸಿ ಹುಣ್ಣಿಮೆ ಪೂಜೆ ಮಾಡುವರೆಂದರು.
ಬೈಕ್ಜಾಥಾ: ನವೆಂಬರ್ ೧೫ ರಂದು ೩೦೦ ಬೈಕ್ಗಳಲ್ಲಿ ನಗರದ ಕತ್ರಿಮಾರಮ್ಮ ದೇವಾಲಯದಿಂದ ಆರಂಭಗೊಳ್ಳುವ ಬೈಕ್ ರ್ಯಾಲಿ ಮಹಾತ್ಮಗಾಂಧಿ ರಸ್ತೆಯಲ್ಲಿ ತೆರಳಲಿವೆ. ಅಕ್ಕಪಕ್ಕದ ಊರುಗಳಿಗೆ ತೆರಳಿ ದತ್ತಜಯಂತಿ ವಿಷಯ ತಿಳಿಸಲಿದ್ದಾರೆಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ ಹೇಳಿದರು.
ದಕ್ಷಿಣ ಕರ್ನಾಟಕದ ಬರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ಸೂರ್ಯ ಮಾತನಾಡಿ, ಈ ಬಾರಿ ದತ್ತಜಯಂತಿಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ನಗರ ಅಲಂಕಾರ ಭರ್ಜರಿಯಾಗಿಯೇ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ಪೈ, ಉಪಾಧ್ಯಕ್ಷ ಯೋಗೀಶ್ರಾಜ್ ಅರಸ್, ವಿಭಾಗದ ಅಧ್ಯಕ್ಷ ಆರ್.ಡಿ.ಮಹೇಂದ್ರ, ಕಾರ್ಯದರ್ಶಿ, ಬಜರಂಗದಳ ವಿಭಾಗ ಸಂಯೋಜಕ ಶಶಾಂಕ್, ಭಜರಂಗದಳ ಕಾರ್ಯದರ್ಶಿ ರಂಗನಾಥ್ ಉಪಸ್ಥಿತರಿದ್ದರು.
Datta Jayanti at Dattapeeth