ಚಿಕ್ಕಮಗಳೂರು: ಆಧುನಿಕ ಶಿಲ್ಪಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರುರವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಕೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಸಲಹೆ ನೀಡಿದರು.
ಅವರು ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ, ಎನ್ಎಸ್ಯುಐ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಹರುರವರು ನವಭಾರತದ ಸಂಕಲ್ಪವನ್ನು ಹೊತ್ತು ಪ್ರಧಾನಮಂತ್ರಿಯಾಗಿ ಭಾರತವನ್ನು ಸದೃಢವಾಗಿ ಮುನ್ನಡೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ಭಾರತದ ವಿದೇಶಾಂಗ ನೀತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಿದ್ಧಾಂತವೇ ಸಂವಿಧಾನವಾಗಿದೆ. ಜಾತ್ಯಾತೀತ ನೆಲೆಗಟ್ಟಿನಲ್ಲಿ ಸಂವಿಧಾನಕ್ಕೆ ಗೌರವವನ್ನು ಕೊಡಲಾಗುತ್ತಿದ್ದು, ದೇಶವು ಪ್ರಗತಿ ಕಾಣಲು ನೆಹರು ಕಾರಣವಾಗಿದ್ದಾರೆ. ದೇಶ ಮತ್ತು ಹೊರ ದೇಶಗಳ ಸಂಬಂಧಗಳನ್ನು ಸುಧಾರಿಸುವಲ್ಲಿ ಯಶಸ್ಸು ಕಂಡ ಧೀಮಂತ ನಾಯಕ ನೆಹರು ಎಂದು ಬಣ್ಣಿಸಿದರು.
ನೆಹರುರವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅಧಿಕಾರವಧಿಯಲ್ಲೂ ಮಕ್ಕಳ ಜೊತೆ ಬೆರೆತು ಅವರೊಂದಿಗೆ ಅನ್ಯೋನತೆಯಿಂದ ಕಾಲ ಕಳೆಯುತ್ತಿದ್ದರು. ಅವರ ಆದರ್ಶ ಮೌಲ್ಯಗಳನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್ಎಸ್ಯುಐ ಜಿಲ್ಲಾಧ್ಯಕ್ಷ ಬಿ.ಟಿ.ಸುಮಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೆಹರುರವರು ಹಾಕಿಕೊಟ್ಟಿರುವ ಹಾದಿಯಲ್ಲಿ ಯುವ ಜನಾಂಗ ಸಾಗಬೇಕು. ಅವರ ಅಧಿಕಾರವಧಿಯಲ್ಲಿ ರೈತರಿಗೆ, ಯುವ ಜನಾಂಗಕ್ಕೆ ಉತ್ತಮವಾದ ಕಾರ್ಯಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತ ದೇಶದ ಮೊದಲ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದ ನೆಹರುರವರು ಉತ್ತಮವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜನ್ಮದಿನಾಚರಣೆಯನ್ನು ಪ್ರತಿದಿನ ನೆನೆಸುವಂತಾಗಬೇಕು ಎಂದು ತಿಳಿಸಿದರು.
ಜವಹಾರಲಾಲ್ ನೆಹರುರವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರು ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಪರಮೇಶ್ ರಾಜ್ ಅರಸ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಆಶ್ರಯ ಸಮಿತಿ ಸದಸ್ಯ ಪ್ರಸಾದ್ ಅಮಿನ್, ಮುಖಂಡರಾದ ಉಪ್ಪಳ್ಳಿ ಕೆ.ಭರತ್, ಕುಸುಮಾ ಭರತ್, ಕೆಪಿಸಿಸಿ ಎಸ್.ಸಿ ಘಟಕ ರಾಜ್ಯ ಸಂಚಾಲಕಿ ನೇತ್ರಾವತಿ, ಸುನೀಲ್, ಉಮೇಶ್ ಶೆಟ್ಟಿ, ಎನ್ಎಸ್ಯುಐ ಮುಖಂಡರು ಇದ್ದರು.
Former Prime Minister Pandit Jawaharlal Nehru’s birthday