ಚಿಕ್ಕಮಗಳೂರು: ಬಸವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿಯ ವಿಗ್ರಹ ಅತ್ಯಂತ ಸುಂದರವಾದುದು. ಈ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಋಷಿ-ಮುನಿಗಳು ವಾಸಿಸುತ್ತಿದ್ದ ಈ ವಾತಾವರಣದಲ್ಲಿ ವೇದೋಪಾಸನೆ, ನಾದೋಪಾಸನೆ ನಡೆದಿದೆ. ಈಗ ನಾಗರಾಜರಾವ್ ಕಲ್ಕಟ್ಟೆಯವರು ಹೊಸತೊಂದು ಗೀತೆಯನ್ನು ಸಮರ್ಪಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ನಗರದ ಮನೋರಂಜಿನಿ ಸಂಗೀತ ಸಭಾದ ಸ್ಥಾಪಕ ಬಿ.ಸಿ.ಜಯರಾಮ್ ತಿಳಿಸಿದರು.
ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆಯವರು ಬರೆದು ರಾಗ ಸಂಯೋಜಿಸಿ ಗಾಯಕಿ ರೇಖಾ ಪ್ರೇಮ್ಕುಮಾರ್ ಅವರೊಂದಿಗೆ ಹಾಡಿದ `ಕೃಷ್ಣ ಗೋಪಾಲಕೃಷ್ಣ’ ಭಕ್ತಿಗೀತೆಯನ್ನು ಇತ್ತೀಚೆಗೆ ಬಸವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೃಷ್ಣ ತನ್ನ ಮುರಳಿಯ ನಾದದ ಮೂಲಕ ಜನರನ್ನು ಮಾತ್ರವಲ್ಲ, ಗೋಮಾತೆಯರನ್ನೂ ಮೂಕವಿಸ್ಮಿತವಾಗಿಸಿದವನು. ನಾದಪೂಜೆ ಅವನಿಗೆ ಅತಿಪ್ರಿಯ. ಪ್ರತೀ ಕ್ಷೇತ್ರಗಳಿಗೂ ಅಲ್ಲಿನ ಮಹಿಮೆ ಸಾರುವ ಗೀತೆ ಅವಶ್ಯಕ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕವಯತ್ರಿ ತನ್ಮಯಿ ಪ್ರೇಮ್ಕುಮಾರ್ ಮಾತನಾಡಿ. ಭಕ್ತಿ ಸಾಹಿತ್ಯ ಅಂತರಂಗದಲ್ಲಿ ಸ್ಫುರಣೆಯಾಗುವಂತಾದ್ದು. ಅದು ಬಹಿರ್ಮುಖವಾಗಿ ಬಂದು ಸಂಗೀತದ ರೂಪ ಪಡೆಯುವುದು ಎಂದರೆ ಅದು ಕಲಾವಿದರ ತಪಸ್ಸು, ಶ್ರದ್ಧೆಯ ಫಲ. ಈ ದಿಸೆಯಲ್ಲಿ ಕಲ್ಕಟ್ಟೆಯವರ ಭಕ್ತಿ ಸಾಹಿತ್ಯ ನಿಜಕ್ಕೂ ಭಕ್ತರ ಪಾಲಿಗೆ ಅಮೂಲ್ಯ ಕೊಡುಗೆಗಳು. ಭಕ್ತಿ ಸಾಹಿತ್ಯದ ಗುನುಗುನುಗುವಿಕೆಯೂ ಕೂಡ ಭಗವದನುಗ್ರಹಕ್ಕೆ ದಾರಿ. ಸಾವಿರಾರು ಭಕ್ತಿಗೀತೆಗಳನ್ನು ಬರೆದು ಜನಮಾನಸದಲ್ಲಿ ನಿಂತಿರುವ ಕಲ್ಕಟ್ಟೆಯವರ ಸ್ಥಳೀಯ ಭಕ್ತಿ ಗೀತೆಗಳ ಸರಣಿ ರಚನೆ, ಗಾಯನ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಚುಟುಕು ಕವಿ ಅರವಿಂದ ದೀಕ್ಷಿತ್, ಗಾಯಕಿ ಅನುಷ ಅಂಚನ್ ಆಶಯ ನುಡಿಯಾಡಿದರು. ಅರ್ಚಕರಾದ ಸುದರ್ಶನ್, ವಿಜಯಪುರ ಸೀತಾರಾಂ, ಶ್ರೀಧರ್, ನಾಟಿವೈದ್ಯೆ ಶಾಂತಮಲ್ಲೇಶರಾವ್, ಅನಿತಾ ನಾಗೇಂದ್ರ, ಕೃಷ್ಣಮೂರ್ತಿ, ಲತಾ ಮುರುಗೇಶ್, ಅರವಿಂದ ಕುಮಾರ್, ಮಂಜುಳಾ ದೀಕ್ಷಿತ್ ಉಪಸ್ಥಿತರಿದ್ದರು.
ವೀಣಾ ಅರವಿಂದ್ ಸ್ವಾಗತಿಸಿದರು. ನಾಗರಾಜರಾವ್ ಕಲ್ಕಟ್ಟೆ ನಿರೂಪಿಸಿದರು. ಮಾಲಿನಿ ರಮೇಶ್ ವಂದಿಸಿದರು.
“Krishna Gopalakrishna” song dedicated to the world