ಚಿಕ್ಕಮಗಳೂರು: -ಕೆಲ ಕಾಲ ಬದುಕಿ ಚಿರ ಕಾಲ ಉಳಿದ ಭಗವಾನ್ ಬಿರ್ಸಾ ಮುಂಡಾರವರ ಜೀವನ ಸ್ಫೂರ್ತಿದಾಯಕವಾದುದು, ಬುಡಕಟ್ಟು ಸಮುದಾಯದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಹೇಳಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ, ನವದೆಹಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ೧೫೦ನೇ ಭಗವಾನ್ ಬಿರ್ಸಾ ಮುಂಡ ಜಯಂತಿ (ಜನಜಾತೀಯ ಗೌರವ್ ದಿವಸ್) ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಅನೇಕ ವೀರರನ್ನು, ಸ್ವಾತಂತ್ರ್ಯ ಹೋರಟಗಾರರ ಚರಿತ್ರೆಯನ್ನು ಇತಿಹಾಸದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸ್ವಾತಂತ್ರ್ಯದ ಜೊತೆಗೆ ಸ್ವಾಭಿಮಾನ ಹಾಗೂ ಬುಡಕಟ್ಟು ಸಮುದಾಯದ ಜನರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳಿಗಾಗಿ ಹೋರಾಡಿ ಬುಡಕಟ್ಟು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಬಿರ್ಸಾ ಮುಂಡಾರವರ ಜೀವನ ಸಾಧನೆಗಳು ಶ್ಲಾಘನೀಯವಾದುದು ಎಂದರು.
ಬುಡಕಟ್ಟು ಜನರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲಾಡಳಿತವು ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಬುಡಕಟ್ಟು ಜನಾಂಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುತ್ತಿದೆ. ಏಕಲವ್ಯ, ಆಶ್ರಮಶಾಲೆ, ನವೋದಯದಂತಹ ವಸತಿ ಶಾಲೆಗಳನ್ನು ತೆರೆದು ಉಚಿತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಣದಿಂದ ತಮ್ಮ ಕನಸಿನ ಹುದ್ದೆಗಳನ್ನು ಪಡೆಯಬಹುದು. ಜೀವನದ ಗುಣಮಟ್ಟ ಉತ್ತಮಗೊಳಿಸಲು ಶಿಕ್ಷಣ ಒಂದೇ ಸೂಕ್ತ ಮಾರ್ಗ. ಬುಡಕಟ್ಟು ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಬೆಳೆಸಬೇಕು. ತಮ್ಮ ವೃತ್ತಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದ ಅವರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬುಡಕಟ್ಟು ಜನರ ಜೀವನ ಕ್ರಮ, ಆಚಾರ ವಿಚಾರ ಹಾಗೂ ಸಂಸ್ಕೃತಿ ಸಂಪ್ರದಾಯಗಳು ವಿಶೇಷವಾದದ್ದು, ಭಗವಾನ್ ಬಿರ್ಸಾ ಮುಂಡರವರು ಬುಡಕಟ್ಟು ಸಮುದಾಯ ಜನರ ಹಕ್ಕು ಹಾಗೂ ಉತ್ತಮ ಸಾಮಾಜಿಕ ಜೀವನ ನಿರ್ವಹಣೆಗಳಿಗಾಗಿ ಬ್ರಿಟಿಷರಿಗೆ ತಾನೊಬ್ಬನೇ ಒಂದು ದಂಡಾಗಿ ಕಾಣಿಸಿಕೊಳ್ಳುವಂತೆ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಾರೆ. ಸ್ವಾಭಿಮಾನಕ್ಕಾಗಿ ಶಿಕ್ಷಣದಿಂದ ವಂಚಿತರಾದ ಅವರು ಸಮುದಾಯಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ತಮ್ಮದೇ ಆದ ಕುಲ ಕಸುಬುಗಳ ಮೂಲಕ ಜೀವನ ನಿರ್ವಹಿಸುವ ಇಂದಿನ ಸಮುದಾಯದ ಅನೇಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಪ್ರಸ್ತುತ ಯುಗದಲ್ಲಿ ಶಿಕ್ಷಣ ಬಹುಮುಖ್ಯವಾದುದು. ಶಿಕ್ಷಣ ಪಡೆಯುವುದರ ಮೂಲಕ ಸಮಾಜದಲ್ಲಿ ತಮಗಿರುವ ಹಕ್ಕು ಕರ್ತವ್ಯಗಳನ್ನು ತಿಳಿದು ತಮಗೆ ದೊರಕ ಬೇಕಾಗಿರುವ ಸೌಲಭ್ಯಗಳನ್ನು ಧೈರ್ಯದಿಂದ ಪಡೆಯಬಹುದಾಗಿದೆ. ಸಮುದಾಯದ ಜನರು ಒಂದು ಸ್ಥಳದಲ್ಲಿ ನೆಲೆಯೂರಿ ಅಲೆಮಾರಿ ಜೀವನಕ್ಕೆ ಅಂತ್ಯವಾಡಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದ ಅವರು ಬುಡಕಟ್ಟು ಜನಾಂಗದ ಜನರು ಸಂಘಟಿತರಾಗಿ ರಾಜಕೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಿ ಎಂದರು.
ರಾಷ್ಟ್ರೀಯ ಆದಿವಾಸಿ ಅಂದೋಲನ ಹಾಗೂ ಜಿಲ್ಲಾ ಬುಡಕಟ್ಟು ಕೃಷಿಕ ಸಂಘದ ಮುಖಂಡರಾದ ಜ್ಯೋತಿ ಹೆಚ್.ಎಸ್ ಮತ್ತು ತಾಲ್ಲೂಕಿನ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್ ಭಗವಾನ್ ಬಿರ್ಸಾ ಮುಂಡರ ಜೀವನ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಿರ್ಸಾ ಮುಂಡ ಜಯಂತಿ ಅಂಗವಾಗಿ ಏಕಲವ್ಯ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.
ಕಾರ್ಯಕ್ರದಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ ಹೆಚ್.ಸಿ., ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೇಶ್, ಆದಿವಾಸಿ ಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ಮೇದಾ ಸಮುದಾಯದ ಮುಖಂಡೆ ಶೋಭಾ, ದಲಿತ ಮುಖಂಡರಾದ ಕೆ.ಟಿ ರಾಧಕೃಷ್ಣ, ಹುಣಸೆಮಕ್ಕಿ ಲಕ್ಷ್ಮಣ್, ಮರ್ಲೆ ಅಣ್ಣಯ್ಯ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
150th Bhagwan Birsa Munda Jayanti (Janajati Gaurav Divas)