ಚಿಕ್ಕಮಗಳೂರು: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ನಿಸ್ವಾರ್ಥವಾದುದು. ಅವರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಯೋನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯ ಅವರನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿ ಸಮಾಜದ ಸತ್ಪ್ರಜೆಗಳಾಗಿ ರೂಪಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಸರ್ಕಾರವು ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ ಹಾಗೂ ಉತ್ತಮ ಬೆಳವಣಿಗೆಗಾಗಿ ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದು ಈ ಕೇಂದ್ರಗಳಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಮಾತೃ ವಾತ್ಸಲ್ಯದಿಂದ ಪೋಷಣೆ ಮಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅನೇಕ ಬಡವರ್ಗದ ಜನರು ಇಂದಿಗೂ ಪ್ರತಿ ದಿನ ಕೂಲಿ ಮಾಡಿ ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ. ಕೂಲಿಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಅವರು ತಮ್ಮ ಮಕ್ಕಳನ್ನು ಕೆಲಸದ ಸ್ಥಳಗಳಲ್ಲಿ ಇರಿಸಿ ಕೆಲಸ ನಿರ್ವಹಿಸುವುದು ಕಷ್ಟಕರ. ಇವರ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ನೇಮಿಸಿಕೊಂಡು ಆಟ, ಪಾಠ ಹಾಗೂ ಪೌಷ್ಠಿಕ ಆಹಾರ ನೀಡಿ ಅವರ ಉತ್ತಮ ಬೆಳವಣಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಪೋಷಣೆ ಮಾಡಲಾಗುತ್ತಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಇಂದಿಗೂ ಯಾವುದೇ ವೇತನ ಇಲ್ಲದೆ ಗೌರವಧನವನ್ನು ಸ್ವೀಕರಿಸಿ ಪ್ರತಿ ಮಗುವನ್ನು ತಮ್ಮ ಮಕ್ಕಳಂತೆ ಪೌಷ್ಠಿಕ ಆಹಾರ ಒದಗಿಸಿ ಮಗುವಲ್ಲಿನ ನ್ಯೂನ್ಯತೆಯನ್ನು ಹೋಗಲಾಡಿಸಿ ಉತ್ತಮ ವಾತಾವರಣದಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದ ಜನರನ್ನು ತನ್ನ ಕುಟುಂಬವೆಂದು ಭಾವಿಸಿ ಜನರೊಂದಿಗೆ ಬೆರೆತು ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಇನ್ನಿತರೇ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಂದ ಸಮಸ್ಯೆಗೆ ಪರಿಹಾರ ಒದಗಿಸುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದ ಅವರು ಪ್ರತಿಯೊಬ್ಬರು ಅವರ ಸೇವೆಯನ್ನು ಸ್ಮರಿಸಿ ಗೌರವಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್ ಮಾತನಾಡಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾಗಿದೆ. ಗ್ರಾಮದ ಜನರ ಹುಟ್ಟು, ಸಾವಿನಾ ಮಾಹಿತಿಯಿಂದ ಪ್ರತಿ ವಿವಿರವನ್ನು ದಾಖಲಿಸಿ ಅವರ ಅವಶ್ಯಕತೆಗಳನ್ನು ಪೂರೈಸಲು ಸಹಕರಿಸುತ್ತಾರೆ.
ಮಕ್ಕಳೊಂದಿಗೆ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಸರ್ಕಾರ ಒದಗಿಸುವ ಪೌಷ್ಠಿಕ ಆಹಾರ ಪದಾರ್ಥಗಳು ತಲುಪಿಸುವುದರೊಂದಿಗೆ ಹಾಗೂ ಅವರ ಆರೋಗ್ಯ ಕ್ಷೇಮಾಭಿವೃದ್ಧಿಯನ್ನು ವಿಚಾರಿಸಿ ಸುರಕ್ಷಿತವಾರಿಸಲು ಶ್ರಮಿಸುತ್ತಾರೆ ಜೊತೆಗೆ ಮಕ್ಕಳನ್ನು ಮಾತೃ ಹೃದಯದಿಂದ ಪೋಷಣೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಡಲು ಸಹಕರಿಸುತ್ತಾರೆ.
ಮಹಿಳೆ ಹಾಗೂ ಮಕ್ಕಳ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಬಡ ವರ್ಗದ ಜನರು ಕೂಲಿ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ ಎಂದ ಅವರು ಇವರ ಸಾಮಾಜಿಕ ಸೇವೆಯು ಅಗಾಧವಾದುದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ ಪಿ., ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಂತೋಷ್ ಡಿ., ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಸಿ., ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.
Farewell to Anganwadi workers and helpers