ಚಿಕ್ಕಮಗಳೂರು: ಮಾನವನ ಸೇವೆಯೆ ಮಾಧವನ ಸೇವೆ ಎಂಬ ಶ್ರೀಸತ್ಯಸಾಯಿ ಬಾಬಾ ಆಶಯದಂತೆ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ಶ್ರೀಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ನುಡಿದರು.
ಗಾಳಿಪೂಜೆ ಗ್ರಾಮದಲ್ಲಿ ಶ್ರೀಸತ್ಯಸಾಯಿ ಸೇವಾ ಸಮಿತಿ ಮತ್ತು ಸೇವಾಕ್ಷೇತ್ರದ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ೯೯ನೆಯ ಜನ್ಮದಿನೋತ್ಸವದ ಪ್ರಯುಕ್ತ ಇಂದು ಆಯೋಜಿಸಿರುವ ‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧ್ಯಾತ್ಮ, ಸೇವೆ ಮತ್ತು ಶಿಕ್ಷಣ ಮೂರು ವಿಭಾಗಗಳಲ್ಲಿ ಬಾಬಾ ಅವರ ಆಶಯದಂತೆ ಚಟುವಟಿಕೆ ನಡೆಸಲಾಗುತ್ತಿದೆ. ವಾರದ ಭಜನೆ ಜಪ, ತಪ, ಆಧ್ಯಾತ್ಮಿಕ ವಲಯದ ಸೇವೆ. ನಿತ್ಯ ನಾರಾಯಣನ ಸೇವೆ, ಆರೋಗ್ಯ ಶಿಬಿರಗಳು, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ನೆರವು ಪ್ರಮುಖ ಸೇವಾ ಚಟುವಟಿಕೆಯಾದರೆ, ಶಾಲಾಕಾಲೇಜುಗಳು, ಬಾಲಸಂಸ್ಕಾರ ಕೇಂದ್ರಗಳು, ಶೈಕ್ಷಣಿಕ ವಲಯದ ಕಾರ್ಯಗಳೆಂದು ಅವರು ವಿವರಿಸಿದರು.
ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಶ್ರೀಬಾಬಾ ಅವರದು ಜಗತ್ತು ಕಂಡರಿಯದ ಸೇವೆ ಎಂದು ಬಣ್ಣಿಸಿದ ಶಿವಮೂರ್ತಿ, ವೇದ-ಮಂತ್ರಗಳ ಪಠಣ, ಕುಡಿಯುವ ನೀರು, ವೈದ್ಯಕೀಯ ನೆರವು ಸ್ವಾಮಿಯ ಅನುಗ್ರಹದಿಂದ ಅವಿಚ್ಛನ್ನವಾಗಿ ಮುಂದುವರೆದಿದೆ ಎಂದರು.
ಆಶಾಕಿರಣದ ಅಧ್ಯಕ್ಷರಾದ ಮಕ್ಕಳತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಸಾಯಿಬಾಬಾ ಅವರು ಎಲ್ಲರನ್ನೂ ಪ್ರೀತಿಸು ಎಲ್ಲರನ್ನೂ ಗೌರವಿಸು ಎಂದಿದ್ದಾರೆ. ಪ್ರೇಮ, ಸೇವೆಯಿಂದ ಜನಮನವನ್ನು ಗೆದ್ದವರು. ಆರೋಗ್ಯವೇ ಭಾಗ್ಯ. ಎಲ್ಲರೂ ಆರೋಗ್ಯವಂತರಾಗಿ ಸುಖವಾಗಿರಬೇಕೆಂಬುದು ಅವರ ಅಪೇಕ್ಷೆಯಾಗಿತ್ತು.
ಸಂಗೀತಮಯವಾದ ಸಾಮಾನ್ಯಕುಟುಂಬದಲ್ಲಿ ಜನಿಸಿದ ಸತ್ಯಬಾಬಾ ಅವರು ಬಾಲ್ಯದಲ್ಲೆ ಚಮತ್ಕಾರವನ್ನು ಮೆರೆದವರು.
ತಾಯಿ ಈಶ್ವರಮ್ಮ ಹೇಳಿದಂತೆ ಆಸ್ಪತ್ರೆ ಕಟ್ಟಿದ್ದಾರೆ. ಸಣ್ಣದ್ದಾಗಿ ಪ್ರಾರಂಭಿಸಿದ ಶಾಲೆ ಇಂದು ವಿಶ್ವವಿದ್ಯಾನಿಲಯವಾಗಿ ಬೆಳೆದಿದೆ. ಅನಂತಪುರ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆ ಮಹತ್ವದ ಸೇವಾಕಾರ್ಯ ಎಂದ ಡಾ.ಜೆ.ಪಿ.ಕೆ., ಆರೋಗ್ಯ ಮತ್ತು ವಿದ್ಯೆ ನಾಣ್ಯದ ಮುಖಗಳಂತೆ ದೇಶದ ಅಭಿವೃದ್ಧಿಗೆ ಸಹಕಾರಿ ಎಂಬುದನ್ನು ಅರಿತು ಕಾರ್ಯನಿರ್ವಹಿಸಿದವರೆಂದರು.
ಆರೋಗ್ಯ ಪಾಲನೆಗೆ ಆದ್ಯತೆ ನೀಡಿ ಪುಟಪರ್ತಿ ಮತ್ತು ವೈಟ್ಫೀಲ್ಡ್ನಲ್ಲಿ ಬೃಹತ್ತಾದ ಆಸ್ಪತ್ರೆಗಳನ್ನು ನಿರ್ಮಿಸಿದ್ದು ಜಗತ್ತಿನಲ್ಲೆ ಉಚಿತ ಆರೋಗ್ಯ ಸೇವೆಗೊಂದು ಮಾದರಿಯಾಗಿದೆ. ೧೩೬ದೇಶಗಳಲ್ಲಿ ಸುಮಾರು ಸಾವಿರ ಸಂಸ್ಥೆಗಳು ಬಾಬಾ ಅವರ ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದ ಕೃಷ್ಣೇಗೌಡ, ಜಗತ್ತಿನಲ್ಲಿ ೮,೫೦೦ ಕಾಯಿಲೆಗಳಿದ್ದು ಅವೆಲ್ಲಕ್ಕೂ ಔಷಧಿ ಇಲ್ಲ. ಒಳ್ಳೆಯ ಜೀವನ ಅಭ್ಯಾಸ, ಶುದ್ಧಕುಡಿಯುವ ನೀರು, ನಿತ್ಯ ವ್ಯಾಯಾಮದಿಂದ ಬಹುತೇಕ ಕಾಯಿಲೆಗಳನ್ನು ದೂರ ಮಾಡಬಹುದೆಂದರು.
ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಮಾಜಿಅಧ್ಯಕ್ಷ ವೈ.ಜಿ.ಸುರೇಶ್ ಪ್ರಥಮಬಾರಿಗೆ ಗಾಳಿಪೂಜೆಯಲ್ಲಿ ಬೃಹತ್ ಆರೋಗ್ಯ ಶಿಬಿರ ಸಾರ್ಥಕವಾಗಿ ಆಯೋಜನೆಗೊಂಡಿದೆ. ೧೪ವೈದ್ಯರು ಬಂದು ತಪಾಸಣೆ ಮಾಡುತ್ತಿದ್ದಾರೆ. ಉಚಿತ ಔಷಧಿ ನೀಡುತ್ತಿರುವುದು ಜನವರಿಗೆ ಉಪಯೋಗವಾಗಿದೆ. ಗಾಳಿಪೂಜೆ, ದೇವರಹಳ್ಳಿ, ಗೌರಿಕೆರೆ, ಮುತ್ತಿನಪುರ, ನಾಗೇನಹಳ್ಳಿ, ಫಲಹಾರಸ್ವಾಮಿ ಮಠ, ಸೂರಗುಪ್ಪೆ ಸೇರಿದಂತೆ ಸುತ್ತಮುತ್ತಲು ಶ್ರಮಿಕವರ್ಗದವರೆ ಅಧಿಕವಾಗಿ ವಾಸ ಮಾಡುತ್ತಿರುವ ಈ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿ ತಪಾಸಣೆ, ಚಿಕಿತ್ಸೆ, ಔಷಧಿ ವಿತರಣೆಯ ಮೂಲಕ ಸತ್ಯಸಾಯಿ ಸಮಿತಿ ಉಪಯುಕ್ತ ಕಾರ್ಯ ಮಾಡುತ್ತಿದೆ ಎಂದರು.
ಶ್ರೀಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಟಿ.ಪಿ.ಭೋಜೇಗೌಡ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಬೆಳಗಿನಿಂದ ಸಂಜೆಯವರೆಗೆ ಆರೋಗ್ಯ ಶಿಬಿರ ನಡೆಯಿತು. ತಾತ್ಕಾಲಿಕ ಪ್ರಯೋಗಶಾಲೆಯನ್ನು ಇಲ್ಲಿ ತೆರೆದಿದ್ದು ಅಗತ್ಯ ಔಷಧಿ, ಮಾತ್ರೆ, ಟಾನಿಕ್ ವಿತರಿಸಲಾಯಿತು.
ಮಕ್ಕಳತಜ್ಞ ಡಾ.ಜೆ.ಪಿ.ಕೃಷ್ಣೇಗೌಡ, ಸ್ತ್ರಿರೋಗ ತಜ್ಞ ಡಾ.ಚಂದ್ರಶೇಖರ್, ಮೂಳೆತಜ್ಞ ಡಾ.ನವೀನ್, ನೇತ್ರತಜ್ಞ ಡಾ.ಸಚಿನ್, ದಂತವೈದ್ಯ ಡಾ.ಅಭಿಷೇಕ್, ಆಯುರ್ವೇದ ವೈದ್ಯೆ ಡಾ.ಗೌರಿವರುಣ್, ಶಸ್ತ್ರತಜ್ಞ ಡಾ.ಸಹದೇವ್, ಡಾ.ಸುನಿಲ್, ಡಾ.ಆರತಿ, ಡಾ.ಹರ್ಷಿತಾ ಸೇರಿದಂತೆ ವೈದ್ಯರ ತಂಡ ಆರೋಗ್ಯ ಶಿಬಿರ ನಡೆಸಿತು.
A huge health camp at Gaḷipuje village