ಚಿಕ್ಕಮಗಳೂರು: ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಾಮಾಜಿಕ ಬದಲಾವಣೆಗೆ ಕಾರಣರಾದ ಕನಕ ಈ ನಾಡಿನ ವಿವೇಕ. ಎಂದು ಹಾಸನ ಜಿಲ್ಲೆ, ಬಾಣವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ದೊರೇಶ್ ಬಿಳಿಕೆರೆ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ ಕನಕದಾಸರು ನಾಡಿನ ಶ್ರೇಷ್ಠ ಕವಿ, ಸಂತ, ಮಹಾನ್ ದಾರ್ಶನೀಕ. ತಮ್ಮ ಕೀರ್ತನೆಗಳು, ಕಾವ್ಯ ಕೃತಿಗಳ ಮೂಲಕ ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಜಾತಿ ಪದ್ಧತಿ, ಮೌಡ್ಯಗಳು ಹಾಗೂ ಸಮಾಜದ ಇನ್ನಿತರ ಅನಿಷ್ಠ ಪದ್ಧತಿಗಳನ್ನು ತಮ್ಮ ಸರಳ ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಇವರ ಜೀವನ ಸಾಧನೆಗಳು ಮಾನವ ಕುಲಕ್ಕೆ ದಾರಿದೀಪವಾಗಿದೆ ಎಂದರು.
ಕನಕ ಈ ನೆಲದ ಆಸ್ತಿ. ತಾನು ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎಂದು ತಂಬೂರಿ ಹಿಡಿದು ಸಾಹಿತ್ಯದ ಮೂಲಕ ಸಮಾಜಿದ ಬಿರುಕನ್ನು ಜೋಡಿಸಿದ ವ್ಯಕ್ತಿತ್ವ ಅವರದು. ಸತ್ಯವಂತರ ಸಂಗವಿರಲು ತೀರ್ಥವೇತಕೆ, ನಿತ್ಯ ಅನ್ನದಾನವಿರಲು ಭಯವೇತಕೆ ಎಂದು ಹೇಳಿದ್ದ ಕನಕದಾಸರು ಜೀವನದಲ್ಲಿ ಬಾಳುವೆ ಮುಖ್ಯವೇ ವಿನಾ, ಜಾತಿ ಮುಖ್ಯ ಅಲ್ಲ ಎಂದು ಸಾರಿದರು. ಭಕ್ತಿ ಬೋಧನೆಗಳನ್ನು ತುಂಬಿರುವ, ವಿಶ್ವ ಮಾನವ ಸಂದೇಶ ಸಾರುವ ಕನಕ ದಾಸರ ಕೀರ್ತನೆಗಳು ಇಂದಿನ ವಿದ್ಯಮಾನದಲ್ಲೂ ಸಾಮಾಜಿಕ ಜಾಗೃತಿಗೆ ಪ್ರಮುಖ ಪಾತ್ರ ವಹಿಸುತ್ತವೆ.
ಎಂದ ಅವರು ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಸಮಾಜದಲ್ಲಿ ಎಲ್ಲರೂ ಸಮಾನರು ಎಲ್ಲರ ಮೇಲಯೂ ದಯೆ ಇರಬೇಕು. ಕುಲ ಕುಲವೆಂದು ಹುಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ, ನಾನು ನೀನು ಎನ್ನದಿರು ಹೀನ ಮಾನವ, ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಎಂದು ಸರಳ ಕೀರ್ತನೆಗಳೊಂದಿಗೆ ಜನ ಸಾಮಾನ್ಯರಿಗೆ ಸಮಾನತೆಯ ಶಿಕ್ಷಣ ನೀಡಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣರಾಗಿರುವ ದಾಸ ಶ್ರೇಷ್ಠ ಕನಕರ ತತ್ವದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲೂಕು, ಬಾಡಗ್ರಾಮ ಕನಕರ ಜನ್ಮ ಸ್ಥಳವಾಗಿದೆ. ಹರಕೆ ಫಲವಾಗಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದ ಕನಕರ ಬಾಲ್ಯದ ಹೆಸರು ತಿಮ್ಮಪ್ಪನಾಯಕ. ಕನಕ ಮಹಾಪುರುಷರು ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಸರ್ವರನ್ನು ಸಮಾನವಾಗಿ ಕಾಣುವ ಅವರ ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಅವರು ಹಾಕಿಕೊಟ್ಟಿರುವ ಹೆಜ್ಜೆ ಗುರುತುಗಳು ಇಂದಿಗೂ ಪ್ರಸ್ತುತವಾಗಿವೆ.
ಮನುಷ್ಯನು ಸದಾ ಸನ್ಮಾರ್ಗದಲ್ಲಿ ಬಾಳಬೇಕು. ನಿತ್ಯ ಕಲಿಯಲು, ಭಕ್ತಿ ಮಾರ್ಗ ಅನುಸರಿಸಲು ಯಾವುದೇ ಜಾತಿ ಕಟ್ಟುಪಾಡುಗಳಿಲ್ಲ. ವಿಶಾಲ ಮನಸ್ಸಿನಿಂದ ಪೂಜಿಸಿದರೆ ದೇವರು ಎಲ್ಲರಿಗೂ ಒಬ್ಬನೇ ಎಂದು ಕನಕರು ಸಾರಿದ್ದಾರೆ. ಕನಕರ ಜೀವನವೇ ಉತ್ಸಾಹದ ಚಿಲುಮೆ ಮನಸ್ಸಿಗೆ ಚೈತನ್ಯ ಸ್ಪೂರ್ತಿ ತುಂಬುತ್ತದೆ ಎಂದ ಅವರು ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂತಹ ಮಹನೀಯರ ತತ್ವಾದರ್ಶಗಳು ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಾಸಪಂಥದಲ್ಲಿ, ಹರಿದಾಸರಲ್ಲಿ ಕನಕರ ಹೆಸರು ಅವಿಸ್ಮರಣೀಯವಾಗಿದೆ. ಜನಸಾಮನ್ಯರೊಂದಿಗೆ ಬೆರೆತು ಜನರ ದನಿಯಾದ ಮಹಾನುಭಾವ ತಮ್ಮ ತತ್ವ ಸಿದ್ದಾಂತಗಳನ್ನು ಆಡುಭಾಷೆಯಲ್ಲಿ ಜನರಿಗೆ ತಿಳಿಸಿದವರು. ಭಕ್ತನಿಗೆ ಜಾತಿ ಅಲ್ಲ ನೀತಿ ಮುಖ್ಯ ಎಂದು ಸಾರಿದ ಕನಕರು ಸಮಾಜದಲ್ಲಿನ ತಾರತಮ್ಯ ವ್ಯವಸ್ಥೆ ವಿರುದ್ಧ ಸೆಟೆದು ನಿಂತವರು. ಜಾತಿಪದ್ದತಿ, ತಾರತಮ್ಯದಿಂದ ನೊಂದು ವ್ಯವಸ್ಥೆ ವಿರುದ್ಧ ಪ್ರತಿಕ್ರಿಯಿಸಿದ ಭಕ್ತ ಕನಕದಾಸ ಶ್ರೇಷ್ಠರು. ಇಂತಹ ಮಹಾತ್ ಸಂತರ ಪಡೆದದು ನಮ್ಮ ನಾಡಿನ ಹೆಮ್ಮೆ. ಇವರ ವಿಚಾರ ದಾರೆಗಳನ್ನು ಯುವ ಜನತೆಗೆ ತಿಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕಿ ರೇಖಾ ಹುಲಿಯಪ್ಪ ಗೌಡ, ಜಿಲ್ಲಾ ಕರುಬ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಕಾರ್ಯದರ್ಶಿ ಶಾಂತೇಗೌಡ, ಖಜಾಂಚಿ ಪುಟ್ಟೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಸಮಾಜದ ಮುಖಂಡೆ ಗಾಯತ್ರಿ ಶಾಂತೇಗೌಡ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್ ಚಂದ್ರೇಗೌಡ, ಬೆಳವಾಡಿ ರವೀಂದ್ರ, ಕೆ.ಟಿ.ರಾಧಾಕೃಷ್ಣ, ಸತ್ಯನಾರಾಯಣ ಸ್ವಾಮಿ, ೫೩೭ನೇ ಕನಕ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಭರತ್, ಖಜಾಂಚಿ ಮಧು, ಹೆಚ್.ಎಲ್.ಕೃಷ್ಣೇಗೌಡ, ನಾಗೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕುರುಬ ಸಮಾಜದ ಮುಖಂಡರುಗಳು, ದಲಿತ ಸಂಘದ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಜಯಂತಿ ಕಾರ್ಯಕ್ರಮದ ಅಂಗವಾಗಿ ಭಕ್ತಶ್ರೇಷ್ಠ ಕನಕದಾಸರ ಭಾವಚಿತ್ರದೊಂದಿಗೆ ತಾಲೂಕು ಕಚೇರಿ ಆವರಣದಿಂದ ಎಂ.ಜಿ ರಸ್ತೆ ಮೂಲಕ ಕುವೆಂಪು ಕಲಾಮಂದಿರದ ವರೆಗೆ ಮೆರವಣಿಗೆ ಮಾಡಲಾಯಿತು. ಶಾಸಕ ಹೆಚ್.ಡಿ ತಮ್ಮಯ್ಯ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆಕರ್ಷಕ ಜಾನಪದ ಕಲಾ ತಂಡಗಳು, ಹಳ್ಳಿ ವಾದ್ಯಗಳು ಮೆರವಣಿಗೆಗೆ ಮೆರಗು ನೀಡಿತ್ತು.
Bhaktashreshtha Sri Kanakadasa’s Jayanti