ಚಿಕ್ಕಮಗಳೂರು: ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ನಮ್ಮಲ್ಲಿ ರೂಢಿಯಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ ಆಶಯ ವ್ಯಕ್ತಪಡಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ `ನಮ್ಮ ನಾಡು-ನಮ್ಮ ಹಾಡು’ ಕಾರ್ಯಕ್ರಮದಡಿ ಆಯೋಜಿಸಿದ್ದ ನಾಡಿನ ಖ್ಯಾತ ಕವಿಗಳ ಕಾವ್ಯ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಬಗ್ಗೆ ನಮ್ಮಲ್ಲಿ ಅಭಿಮಾನವಿರಬೇಕು. ಹಾಗೆಯೇ ನಮ್ಮ ಸಂಸ್ಕೃತಿ, ನಾಡು-ನುಡಿಯ ಬಗ್ಗೆ ಹೆಮ್ಮೆಪಡಬೇಕು ಎಂದರು.
ಕಳೆದ ಸುಮಾರು ೨೦ ವರ್ಷಗಳ ಹಿಂದೆ ಅನೇಕ ತಂದೆ-ತಾಯಿಯರಲ್ಲಿ ತಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕೆಂಬ ಆಕಾಂಕ್ಷೆ ಇದ್ದರೂ ಇಲ್ಲಿ ಅವಕಾಶವೇ ಇರಲಿಲ್ಲ. ಆದರೆ ಇಂದು ಎಂ.ಎಸ್.ಸುಧೀರ್ ಸೇರಿದಂತೆ ಹಲವರು ಆ ಕೊರತೆಯನ್ನು ನೀಗಿಸಿದ್ದಾರೆ. ಸಂಗೀತ ಯುವ ಪೀಳಿಗೆಗೆ ಅತೀ ಮುಖ್ಯ ಎಂದು ಹೇಳಿದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇದೇ ಪ್ರಪ್ರಥಮ ಬಾರಿಗೆ ಕೊಡ ಮಾಡಿರುವ ಪೂರ್ವಿ ಕನ್ನಡ ಸಿರಿ ಪ್ರಶಸ್ತಿಯನ್ನು ಸ್ವೀಕರಿಸಿದ ಸುಗಮ ಸಂಗೀತ ಗಂಗಾದ ಅಧ್ಯಕ್ಷ, ಮಕ್ಕಳ ತಜ್ಞ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕನ್ನಡಕ್ಕಾಗಿ ಕೈಎತ್ತು ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳ ತೋರು ಅದು ಗೋವರ್ಧನ ಗಿರಿಯಾಗುತ್ತದೆ ಎಂದು ಹೇಳಿದವರು ರಾಷ್ಟ್ರಕವಿ ಕುವೆಂಪು ಎಂದು ಹೇಳಿದರು.
ಕನ್ನಡಕ್ಕೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದ್ದು, ಪ್ರಪ್ರಥಮವಾಗಿ ಈ ಪ್ರಶಸ್ತಿ ಕುವೆಂಪು ಅವರಿಗೆ ಬಂದಿದೆ ಎಂದ ಅವರು ದೇಶದಲ್ಲಿ ೧೬೨೩ ಭಾಷೆಗಳಿವೆ. ೪೦೦ಕ್ಕಿಂತ ಹೆಚ್ಚು ಆಡುಭಾಷೆಗಳಿವೆ. ೧೩ ರಾಷ್ಟ್ರೀಯ ಭಾಷೆಗಳಿವೆ. ಜಗತ್ತಿನ ಯಾವ ದೇಶದಲ್ಲೂ ಈ ವಿಶೇಷತೆ ಇಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು ಎಂದು ಕವಿ ಬರೆಯುತ್ತಾನೆ. ಕನ್ನಡಕ್ಕೆ ಆ ಶಕ್ತಿ ಇದೆ, ಅದು ತಾಯಿ ಭಾಷೆ, ಅದು ಹೃದಯದ ಭಾಷೆ ಎಂದು ಬಣ್ಣಿಸಿದರು.
ಸಂಗೀತ ಶಿಕ್ಷಕಿ ವೀಣಾ ಅರವಿಂದ್ ಮಾತನಾಡಿದರು. ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ರಮೇಶ್, ಸಂಗೀತ ಶಿಕ್ಷಕರುಗಳಾದ ಸುಮಾ ಪ್ರಸಾದ್, ಪ್ರಸನ್ನಲಕ್ಷ್ಮೀ, ಗೀತಾ ಸತೀಶ್, ಮಾಲಿನಿ ರಮೇಶ್, ಪದ್ಮಾ ಚಂದ್ರಶೇಖರ್, ಪವಿತ್ರ ದೀಪಕ್, ನಳಿನಾ ವೆಂಕಟೇಶ್, ಪಂಕಜ ಕಶ್ಯಪ್ ವೇದಿಕೆಯಲ್ಲಿದ್ದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತ, ಸುಮಾ ಪ್ರಸಾದ್ ಹಾಗೂ ರೂಪ ನಾಯ್ಕ್ ಕಾರ್ಯಕ್ರಮ ನಿರೂಪಣೆ, ಜ್ಯೋತಿ ಸಂತೋಷ್ ವಂದನಾರ್ಪಣೆ ನೆರವೇರಿಸಿದರು.
ಪೂರ್ವಿ ಗಾನಯಾನದ ೧೦೦ ರವರೆಗಿನ ಸರಣಿಯನ್ನು ಯಶಸ್ವಿಯಾಗಿ ಪೂರೈಸಿ ೧೦೧ನೇ ಸರಣಿಗೆ ವಿಭಿನ್ನವಾಗಿ ಹೆಜ್ಜೆ ಇಟ್ಟಿರುವ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ರಾಜ್ಯೋತ್ಸವ ಆಚರಣೆಗೆ ಪೂರಕವಾಗಿ ನಾಡು-ನುಡಿಗೆ ಸಂಬಂಧಿಸಿದ ಹಾಡುಗಳಿಗೆ ಕಾರ್ಯಕ್ರಮದಲ್ಲಿ ಪ್ರಾಧಾನ್ಯತೆ ನೀಡಿತ್ತು.
ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ಪೂರ್ವಿ ಕಲಾವಿದರ ಬಳಗದ ಜೊತೆಗೆ ನಗರದ ಅಮೃತವರ್ಷಿಣಿ ಸಂಗೀತ ಶಾಲೆ, ಶ್ರೀ ಭರತ ಕಲಾಕ್ಷೇತ್ರ, ಆರಾಧನಾ ಕಲ್ಚರಲ್ ಟ್ರಸ್ಟ್, ರಾಗರಂಜಿನಿ ಸಂಗೀತ ಶಾಲೆ, ಶ್ರೀಮಾತಾ ಸಂಗೀತ ಶಾಲೆ, ಪಾವನಿ ವೀಣಾ ಶಾಲೆ, ವಾಗ್ದೇವಿ ಸಂಗೀತ ಶಾಲೆ, ಶ್ರೀರಾಮ ಪ್ರಿಯ ಸಂಗೀತ ಶಾಲೆ, ಸಪ್ತಸ್ವರ ಸಂಗೀತ ಶಾಲೆ, ಶ್ರೀ ರಾಗಪ್ರಿಯ ಸಂಗೀತ ಶಾಲೆ, ನಾದಂ ಸಂಗೀತ ಶಾಲೆ ಹಾಗೂ ಆಶಾಕಿರಣ ಅಂಧ ಮಕ್ಕಳ ಶಾಲೆಯ ಶಿಷ್ಯವೃಂದದಿಂದ ಆಯೋಜಿಸಿದ್ದ ಗಾಯನ ಕಾರ್ಯಕ್ರಮ ರಾಜ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ವಿಶೇಷವಾಗಿ ಗಮನ ಸೆಳೆಯಿತು.
ಸುಧೀರ್ ಅವರೊಂದಿಗೆ ಗಾಯಕರಾದ ರಾಯನಾಯಕ್, ಚೇತನ್ರಾಮ್, ಸಾರಥಿ ವೆಂಕಟೇಶ್, ಸುರೇಂದ್ರ ನಾಯ್ಕ್ ಡಿ., ಸುಂದರಲಕ್ಷ್ಮೀ, ಅನುಷ, ರುಕ್ಸಾನಾ ಕಾಚೂರ್, ಲಾಲಿತ್ಯ ಅಣ್ವೇಕರ್, ಪ್ರಣಮ್ಯ ಕಶ್ಯಪ್, ಪೃಥ್ವಿಶ್ರೀ ವಿವಿಧ ಗೀತೆಗಳಿಗೆ ತಮ್ಮ ಸುಶ್ರಾವ್ಯ ಧ್ವನಿ ನೀಡಿ ರಂಜಿಸಿದರು. ಪಕ್ಕವಾದ್ಯದಲ್ಲಿ ಮೈಸೂರಿನ ಗಣೇಶ್ ಭಟ್ ಕೀಬೋರ್ಡ್, ತುಮಕೂರಿನ ಹರೀಶ್ ಬಿ.ಎಸ್. ಮ್ಯಾಂಡೋಲಿನ್, ಬೆಂಗಳೂರಿನ ವೇಣುಗೋಪಾಲ್ ತಬಲಾ, ಮೈಸೂರಿನ ಅರುಣ್ಕುಮಾರ್ ರಿದಂ ಪ್ಯಾಡ್ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಗಿತ್ತು.
Our country-our song’ programme