ಚಿಕ್ಕಮಗಳೂರು: ನವೆಂಬರ್ ೧೯ ರಿಂದ ಡಿಸೆಂಬರ್ ೦೫ ರವರೆಗೆ ಜಿಲ್ಲೆಯಾದ್ಯಂತ ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಆಂದೋಲನ ಹಮ್ಮಿಕೊಂಡಿದ್ದು ಎಲ್ಲಾ ಸರ್ಕಾರಿ ಕಚೇರಿಗಳ ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿರುವಂತೆ ಸುಸ್ಥಿತಿಯಲ್ಲಿರಿಸಿಕೊಂಡು ಶುಚಿತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಇಂದು ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯ ಬಹು ಮುಖ್ಯ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮ ರೀತಿಯಲ್ಲಿರಿಸಿಕೊಳ್ಳಬೇಕು. ಬಯಲು ಬಹಿರ್ದಸೆಯಿಂದ ಪರಿಸರ ಮಲಿನಗೊಳ್ಳುವುದಲ್ಲದೆ. ನಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗ್ರಾಮೀಣ ಸಮುದಾಯದ ಜನರಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಬಗ್ಗೆ ಅರಿವು ಮೂಡಿಸಿ ಪ್ರತಿಯೊಬ್ಬರು ಶೌಚಾಲಯ ಬಳಸುವಂತೆ ಪ್ರೇರೆಪಿಸಲು ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಸಹಕಾರಿಯಾಗಲಿದೆ ಎಂದರು.
ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯಗಳನ್ನು ಉತ್ತಮ ರೀತಿಯಲ್ಲಿರಿಸಿಕೊಂಡು ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ ಗಮನ ಹರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯಗಳಿಗೆ ಬ್ರ್ಯಾಂಡಿಂಗ್ ಮಾಡಿಸಿ ವಿಶೇಷ ಚೇತನರ ಬಳಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳ ಸ್ಥಿತಿಯನ್ನು ಪರಿಶೀಲಿಸಿ ಮಕ್ಕಳ ಬಳಕೆಗೆ ಅನುಕೂಲವಾಗುವಂತೆ ಮಕ್ಕಳ ಸ್ನೇಹಿ ಶೌಚಾಲಯ ನಿರ್ಮಿಸಿ ಅದರ ನಿರ್ವಹಣೆ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಮಕ್ಕಳಲ್ಲಿ ಕೈತೊಳೆಯುವ ಅಭ್ಯಾಸವನ್ನು ರೂಡಿಸಿ ಶೌಚಾಲಯಗಳ ಮತ್ತು ಉತ್ತಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳ ಶೌಚಾಲಯಗಳ ಸಮೀಕ್ಷೆ ನಡೆಸಿ ಬಳಸಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸಿ ಶುಚಿತ್ವ ಕುರಿತು ಶಾಲಾ ವಿದ್ಯಾರ್ಥಿಗಳಲ್ಲಿ ವಿಶೇಷ ಚಟುವಟಿಕೆಗಳು, ಸ್ಪರ್ಧೆಗಳನ್ನು ಆಯೋಜಿಸಿ ಅರಿವು ಮೂಡಿಸಬೇಕು ಎಂದ ಅವರು ಶೌಚಾಲಯಗಳ ಸಮರ್ಪಕವಾದ ನಿರ್ವಹಣೆಗೆ ಕ್ರಮ ವಹಿಸಬೇಕು ಎಂದರು.
ಅಲ್ಲದೇ ಎಲ್ಲಾ ಸರ್ಕಾರಿ ಕಚೇರಿಗಳ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ, ಟ್ಯಾಪ್ಗಳು, ಕಿಟಕಿ ಬಾಗಿಲುಗಳ ದುರಸ್ಥಿ ಅಗತ್ಯವಿದ್ದರೆ ಕೂಡಲೇ ದುರಸ್ಥಿಗೊಳಿಸಬೇಕು. ಜಿಲ್ಲೆಯಲ್ಲಿ ಶೌಚಾಲಯ ರಹಿತ ಕುಟುಂಬಗಳಿದ್ದರೆ ಅವರನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿಕೊಡಬೇಕು. ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಿ ಅವುಗಳನ್ನು ಬಳಕೆಗೆ ಯೋಗ್ಯ ರೀತಿಯಲ್ಲಿ ಪರಿವರ್ತಿಸಬೇಕು.
ಪ್ರವಾಸಿ ತಾಣಗಳಲ್ಲಿರುವ ಶೌಚಾಲಯಗಳು ಹಾಗೂ ಇತರೆ ಸಾರ್ವಜನಿಕ ಶೌಚಾಲಯಗಳನ್ನು ಉತ್ತಮ ರೀತಿಯಲ್ಲಿರಿಸಿಕೊಳ್ಳಬೇಕು ಹಾಗೂ ಅಗತ್ಯವಿದ್ದಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಬೇಕು ಹಾಗೂ ಶೌಚಾಲಯಗಳ ಸ್ವಚ್ಛತೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸಿ, ಸನ್ಮಾನಿಸಬೇಕು ಎಂದ ಅವರು ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ ಬಯಲು ಬಹಿರ್ದೆಸೆಯನ್ನು ನಿಲ್ಲಿಸಿ ನೈರ್ಮಲ್ಯಕ್ಕೆ ಮಹತ್ವ ನೀಡಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ (ಪ್ರಭಾರ) ನಯನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕಿ ಸುಜಾತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Our toilet was a pre-meeting organized by our respect movement