ಚಿಕ್ಕಮಗಳೂರು: ದುರಸ್ತಿಯಲ್ಲಿರುವ ರಸ್ತೆಗಳನ್ನು ದುರಸ್ತಿ ಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಚಿಕ್ಕಮಗಳೂರು ತಾಲ್ಲೂಕು ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ತಾಲ್ಲೂಕಿನ ಅನೇಕ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇವುಗಳ ದುರಸ್ತಿ ಕಾರ್ಯಗಳ ಜೊತೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಹೊಸ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ವ್ಯವಸ್ಥಿತವಾದ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣದೊಂದಿಗೆ ಕಾಮಗಾರಿಯು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದರು.
ತಾಲ್ಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಕಾಫಿ, ಭತ್ತ, ಬಾಳೆ ಸೇರಿದಂತೆ ಬೆಳೆದು ನಿಂತಿರುವ ಅನೇಕ ರೈತರ ಬೆಳೆಗಳು ನಾಶವಾಗುತ್ತಿವೆ. ಜೊತೆಗೆ ಸಾರ್ವಜನಿಕರು ಭಯದ ವಾತಾವರಣದಲ್ಲಿ ಓಡಾಡುವ ವಿಪರ್ಯಾಸ ಉಂಟಾಗುತ್ತಿದೆ. ಅಧಿಕಾರಿಗಳು ಆನೆ ಬೀಡು ಬಿಟ್ಟಿರುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಕಾಡಿಗೆ ಅಟ್ಟುವಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಹಾಗೂ ಆನೆ ಹಾವಳಿಯಿಂದ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದರು.
ತಾಲ್ಲೂಕಿನ ಅನೇಕ ಸಾರ್ವಜನಿಕರಿಗೆ ಮನೆ ಹಕ್ಕು ಪತ್ರ ಒದಗಿಸುವಲ್ಲಿ ವಿಳಂಬವಾಗುತ್ತಿದೆ. ಹಕ್ಕು ಪತ್ರ ವಿತರಣೆಗೆ ಇರುವ ತಾಂತ್ರಿಕ ಹಾಗೂ ಇತರೆ ದೋಷಗಳನ್ನು ಗಮನಿಸಿ ಸರಿಪಡಿಸಬೇಕು ಹಾಗೂ ನಿವೇಶನ ರಹಿತ ಅರ್ಹರಿಗೆ ನಿವೇಶನ ಒದಗಿಸಿ ಕೊಡಬೇಕು ಮತ್ತು ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಜಾಗ ಗುರುತಿಸಿ ನೀಡುವಂತೆ ತಿಳಿಸಿದರು.
ಕೆಆರ್ಐಡಿಎಲ್ ಅಧಿಕಾರಿ ಮಾತನಾಡಿ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾರ್ಯವು ಪ್ರಗತಿಯಲ್ಲಿದೆ ಹಾಗೂ ಹೊಸ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿ ಗುಣಮಟ್ಟದ ರಸ್ತೆ ನಿರ್ಮಿಸಿ ಈ ಆರ್ಥಿಕ ವರ್ಷಾಂತ್ಯದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಮಾತನಾಡಿ ಕಾಡಾನೆ ಹಾವಳಿಯು ಪ್ರತಿ ವರ್ಷವು ಈ ಸಮಯದಲ್ಲಿ ನಾಡಿಗೆ ಆಗಮಿಸುತ್ತಿದ್ದು, ಇವುಗಳ ಕುರಿತು ಅಧಿಕಾರಿಗಳು ಪೂರ್ವ ನಿಯೋಜಿತವಾಗಿ ಅಗತ್ಯ ಕ್ರಮ ವಹಿಸಬೇಕು. ಆಹಾರ ಅರಸಿಯೇ ನಾಡಿಗೆ ದಂಡೆತ್ತುತ್ತಿರುವ ಕಾರಣದಿಂದ ಅರಣ್ಯಗಳಲ್ಲಿ ಹೆಚ್ಚು ಹಲಸು, ನೇರಳೆ, ಬಾಳೆ, ಬೈನೆ, ಬಿದಿರುಗಳಂತಹ ಇತರೆ ಹಣ್ಣಿನ ಸಸಿಗಳನ್ನು ಬೆಳೆಸಿ ಅವುಗಳ ಆಹಾರ ಕೊರತೆಯಾಗದಂತೆ ಗಮನ ಹರಿಸಬೇಕು. ರಸ್ತೆ ಬದಿಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುವಂತ ಹಾಗೂ ಪರಿಸರ ಸ್ನೇಹಿ ಸಸಿಗಳನ್ನು ನೆಟ್ಟು ಸಹಕರಿಸಿ ಎಂದು ತಿಳಿಸಿದ ಅವರು ವಿದ್ಯಾರ್ಥಿನಿಲಯಗಳಲ್ಲಿರುವ ಮಕ್ಕಳಿಗೆ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳು ಕಲಿಕೆಗೆ ಗಮನಹರಿಸುವಂತೆ ಪ್ರೋತ್ಸಾಹಿಸಬೇಕು ಎಂದರು.
ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೆಗೌಡ ಮಾತನಾಡಿ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಕೊಠಡಿ ದುರಸ್ತಿಯಲ್ಲಿದ್ದರೆ ದುರಸ್ತಿಗೊಳಿಸಿ ಬೋಧನ ಕೊಠಡಿಗಳನ್ನು ವ್ಯವಸ್ಥಿತವಾಗಿರಿಸಿಕೊಂಡು ಮಕ್ಕಳ ಉತ್ತಮ ಬೆಳವಣಿಗೆಗಾಗಿ ನೀಡುವ ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕ್ಕಿಯಂತಹ ಪೌಷ್ಠಿಕ ಆಹಾರಗಳನ್ನು ವ್ಯವಸ್ಥಿತವಾಗಿ ತಲುಪಿಸಿ ಮಧ್ಯಾಹ್ನದ ಬಿಸಿ ಊಟವನ್ನು ನೀಡುವುದರೊಂದಿಗೆ ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಬೇಕು. ಹತ್ತನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ವಿಷಯವಾರು ವಿಶೇಷ ತರಗತಿಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಧೈರ್ಯದಿಂದ ಎದುರಿಸುಂತೆ ತರಬೇತಿ ನೀಡಿ ಹೆಚ್ಚಿನ ಅಂಕಗಳಿಸಲು ಸಹಕರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಚಿಕ್ಕಮಗಳೂರು ತಾಲ್ಲೂಕು ತಹಶೀಲ್ದಾರ್ ಡಾ. ಸುಮಂತ್, ಕಡೂರು ತಾಲ್ಲೂಕು ತಹಶೀಲ್ದಾರ್ ಪೂರ್ಣಿಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ ವಿಜಯ ಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಹಾಗೂ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಂಜುನಾಥ್ ಎನ್., ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಸಿ.ಆರ್. ಸೇರಿದಂತೆ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರು ಹಾಗೂ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Chikmagalur Taluk Quarterly Meeting