ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಮತ್ತು ವನ್ಯ ಜೀವಿಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಅರಣ್ಯದಲ್ಲಿ ಪೂರಕ ಆಹಾರ ಬೆಳೆಸುವ ಕೆಲಸ ಮಾಡುವಲ್ಲಿ ಇದುವರೆಗೆ ಆಡಳಿತ ನೆಡೆಸಿರುವ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕಾಡಾನೆ ಆವಳಿಯಿಂದಾಗಿ ರೈತರಿಗೆ ತೊಂದರೆಯಾಗುತ್ತಿದ್ದರು ಉದ್ದೇಶಪೂರ್ವಕವಾಗಿ ಅರಣ್ಯದಲ್ಲಿ ವನ್ಯ ಜೀವಿಗಳಿಗೆ ಅಗತ್ಯವಿರುವ ಆಹಾರವನ್ನು ಬೆಳೆಯದೆ ಇರುವುದರಿಂದ ಆನೆಗಳು ನಾಡಿಗೆ ಬಂದು ತೊಂದರೆ ನೀಡುತ್ತಿವೆ, ಈ ಸಂಬಂದ ಅರಣ್ಯ ಸಚಿವರ ನೇತೃತ್ವದಲ್ಲಿ ಪರಿಸರವಾದಿಗಳು, ರೈತರು, ಬೆಳೆಗಾರರನ್ನೊಳಗೊಂಡ ಸಭೆ ಕರೆದು ಚರ್ಚಿಸಬೇಕೆಂದು ಒತ್ತಾಯಿಸಿದರು.
ಅರಣ್ಯ ಇಲಾಖೆಯಲ್ಲಿ ವನ್ಯ ಜೀವಿ ಸಂರಕ್ಷಣೆಯ ಪರಿಕಲ್ಪನೆ ಇಲ್ಲದ ಅಧಿಕಾರಿಗಳು ಇರುವುದರಿಂದ ಅಗತ್ಯವಾಗಿ ಬೇಕಾದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಅನುಷ್ಠಾನವಾಗುತ್ತಿಲ್ಲ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ತುರ್ತು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು, ಅರಣ್ಯವನ್ನು ನಾಶ ಮಾಡುವ ಕೆಲಸ ಮತ್ತು ಸಾಮಾಜಿಕ ಅರಣ್ಯ ಬೆಳೆಸಿ ನೈಸರ್ಗಿಕ ಆಹಾರ ಅಭಾವಕ್ಕೆ ಕಾರಣರಾಗಿದ್ದಾರೆ ಎಂದು ದೂರಿದರು.
ಅರಣ್ಯದಲ್ಲಿ ವನ್ಯ ಜೀವಿಗಳಿಗೆ ಪೂರಕವಾದ ಆಹಾರ ಲಭ್ಯವಾದರೆ ಮುಂದಿನ ದಿನಗಳಲ್ಲಿ ವನ್ಯ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಗಣನೀಯವಾಗಿ ಇಳಿಮುಖವಾಗಲಿದೆ, ಸರ್ಕಾರ ತಕ್ಷಣ ಸೂಕ್ತ ಕ್ರಮಕೈಗೊಂಡು ಕಾಡು ಪ್ರಾಣಿಗಳು ಮಾನವ ಸಂಘರ್ಷಕ್ಕೆ ಯೋಜನೆ ರೂಪಿಸಿದರೆ ಕಾಡಾನೆ ದಾಳಿ ತಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಬಿಪಿಎಲ್ ಕಾರ್ಡ್ ನಿಯಂತ್ರಿಸುವಲ್ಲಿ ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಅರ್ಹರ ಸಾಲಿನಲ್ಲಿ ಅನರ್ಹರು ನುಸುಳುವುದನ್ನು ತಡೆಯಲಾಗಿಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ತಪ್ಪಿಸಲು ಕಠಿಣ ನಿಲುವುಗಳನ್ನು ತಾಳುವುದರ ಮೂಲಕ ಅನರ್ಹರ ಪಡಿರತ ಚೀಟಿಗಳನ್ನು ವಜಾ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರತಿ ನ್ಯಾಯಬೆಲೆ ಅಂಗಡಿಯ ಮುಂದೆ ಬಿಪಿಎಲ್ ಪಡಿತರ ಚೀಟಿದಾರರ ಹೆಸರು ಮತ್ತು ಫೋಟೋವನ್ನು ಪ್ರದರ್ಶಿಸಿದರೆ ಅನರ್ಹರ ಪಡಿತರ ಚೀಟಿ ಪಡೆದವರು ತಿಳಿಯುತ್ತಾರೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ವಕ್ಫ್ ಆಸ್ತಿಗೊಂದಲ ಉಂಟಾಗಿದ್ದು ಈ ಬಗ್ಗೆ ವೈಜ್ಞಾನಿಕ ಅಧ್ಯಾಯನ ನೆಡೆಸಿ ಸೂಕ್ತ ಕ್ರಮ ಕೈಗೊಂಡು ನಿಜವಾದ ರೈತರನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.
ಮಹಾರಾಷ್ಟ್ರದಲ್ಲಿ ನೆಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಮಾಡುತ್ತೇವೆ, ರಾಜ್ಯದಲ್ಲಿ ನೆಡೆದ ಮೂರು ಉಪ ಚುನಾವಣೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಸಿ.ಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ರವರ ಸಂಘಟನೆಯ ಕಿರೀಟಕ್ಕೆ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಒಂದು ಗರಿ ಸಿಕ್ಕಿದೆ ಎಂದರು.
ಹೆಚ್.ಡಿ ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಸೋಲಿನ ನೈತಿಕ ಹೊಣೆ ಹೊತ್ತು ಇಬ್ಬರು ಸಂಸತ್ ಸದಸ್ಯರ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ ಅವರು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಮೊಸಳೆ ಕಣ್ಣೀರಿಗೆ ಮತದಾರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ, ಇದೊಂದು ವಿಶೇಷ ಪ್ರೌಡಿಮೆಯನ್ನು ಅಲ್ಲಿನ ಮತದಾರರು ಪ್ರದರ್ಶಿಸಿದ್ದು ವಿಶೇಷವಾಗಿ ಒಕ್ಕಲಿಗ ನಾಯಕ ಎಂಬುವುದನ್ನು ಕಿತ್ತುಹಾಕಿದ್ದಾರೆ ಎಂದು ಲೇವಡಿ ಮಾಡಿದರು.
Demand to find a permanent solution to prevent the wild elephant plague